ಯಾದಗಿರಿ: ಎಐಡಿಎಸ್‌ಒ ವತಿಯಿಂದ ‘ವಿದ್ಯಾರ್ಥಿಗಳ ಪ್ರತಿಜ್ಞಾ ದಿನ’ ಆಚರಣೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ದಶಕಗಳೇ ಸಂದಿದ್ದರೂ ಕ್ರಾಂತಿಕಾರಿ ಹೋರಾಟಗಾರರ ಆಶಯದ ಶೋಷಣೆಮುಕ್ತ ಸಮಾಜ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಯಾದಗಿರಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸಾಂಕೇತಿಕ ಆಚರಣೆಗೆ ಸೀಮಿತಗೊಳಿಸದೆ, ‘ವಿದ್ಯಾರ್ಥಿಗಳ ಪ್ರತಿಜ್ಞಾ ದಿನ’ವನ್ನಾಗಿ ಆಚರಿಸಲಾಯಿತು. ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ ನೂರಾರು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವ ಸಂಕಲ್ಪದೊಂದಿಗೆ ಗಂಭೀರ ಪ್ರತಿಜ್ಞೆ ಸ್ವೀಕರಿಸಿದರು.

೧೯೪೭ರಲ್ಲಿ ರಾಜಕೀಯ ಅಧಿಕಾರ ಬದಲಾವಣೆಯಾಗಿದ್ದರೂ ನೇತಾಜಿ ಸುಭಾಷ್ ಚಂದ್ರ ಬೋಸ್, ಹುತಾತ್ಮ ಭಗತ್ ಸಿಂಗ್ ಹಾಗೂ ಶ್ರೇಷ್ಠ ಚಿಂತಕ ಶಿಬದಾಸ್ ಘೋಷ್ ಅವರ ಕನಸಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಮೋಚನೆ ಜನಸಾಮಾನ್ಯರಿಗೆ ಇನ್ನೂ ಲಭಿಸಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳು ಲಾಭಕೋರತನಕ್ಕೆ ಒಳಪಟ್ಟಿದ್ದು, ಬಂಡವಾಳಶಾಹಿ ನೀತಿಗಳಿಂದಾಗಿ ರೈತರು, ಕಾರ್ಮಿಕರು ಹಾಗೂ ಯುವಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹಾಗೂ ಸಾಂಸ್ಕೃತಿಕ ಅವನತಿ ಹೆಚ್ಚಾಗಿದ್ದು, ಶ್ರಮದ ಫಲಗಳು ಶ್ರಮಿಕರಿಗೆ ಸಲ್ಲುವ ವರ್ಗ-ರಹಿತ ಸಮಾಜವಾದಿ ಭಾರತದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಕ್ರಿಯವಾಗಿ ದುಡಿಯಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಲಾಯಿತು.

ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಾನ್ ಕ್ರಾಂತಿಕಾರಿಗಳ ವಿಚಾರಧಾರೆಗಳನ್ನು ಬಿಂಬಿಸುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯರಾದ ಶಿಲ್ಪಾ ಬಿ.ಕೆ., ವಿಕ್ರಮ್, ವಿನಾಯಕ್, ಶ್ರೇಯಾ, ಮರೀಲಿಂಗಮ್ಮ, ರಾಜು, ನರಸಿಂಗಮ್ಮ, ಶಿವಾಜಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku