ನಾರಾಯಣ ಗೌಡರ ಕುರಿತ ಯತ್ನಾಳ್ ಹೇಳಿಕೆ ಖಂಡನೀಯ: ಭೀಮು ನಾಯಕ್ ಆಕ್ರೋಶ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡರ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಗುರವಾಗಿ ಮಾತನಾಡಿರುವುದನ್ನು ಕರವೇ ಯಾದಗಿರಿ ಜಿಲ್ಲಾಧ್ಯಕ್ಷ ಭೀಮು ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಲಕ್ಷಾಂತರ ಜನರಿಗೆ ಕನ್ನಡದ ದೀಕ್ಷೆ ನೀಡಿ, ಕನ್ನಡ ನಾಡು-ನುಡಿ ಹಾಗೂ ಗಡಿ ಸೇರಿದಂತೆ ವಿವಿಧ ಕನ್ನಡಪರ ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ನಾರಾಯಣ ಗೌಡರ ಕುರಿತು ಯತ್ನಾಳ್ ಅವರು ಹಗುರವಾಗಿ ಮಾತನಾಡಬಾರದು ಎಂದು ಆಗ್ರಹಿಸಿದರು.

ಯತ್ನಾಳ್ ಅವರು ಜಾತಿ, ಮತ ಹಾಗೂ ಹಿಂದುತ್ವದ ವಿಚಾರಗಳ ಕುರಿತು ಮಾತನಾಡಿಕೊಳ್ಳಲಿ. ಆದರೆ ನಾರಾಯಣ ಗೌಡರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಭೀಮು ನಾಯಕ್ ಹೇಳಿದರು.

ಯಾವುದೇ ಪಕ್ಷದ ಪರವಲ್ಲ ಕರವೇ

ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ಅದು ಕಾಂಗ್ರೆಸ್ ರಕ್ಷಣಾ ವೇದಿಕೆಯೂ ಅಲ್ಲ ಎಂದು ಭೀಮು ನಾಯಕ್ ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕರವೇ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಪ್ರಕರಣಗಳು ದಾಖಲಾಗಿವೆ. 2023ರ ಡಿಸೆಂಬರ್‌ನಲ್ಲಿ ನಡೆದ ನಾಮಫಲಕ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಸುಮಾರು 30ರಿಂದ 35 ಕರವೇ ಕಾರ್ಯಕರ್ತರನ್ನು 15 ದಿನಗಳ ಕಾಲ ಜೈಲಿನಲ್ಲಿ ಇರಿಸಿತ್ತು ಎಂದು ಅವರು ತಿಳಿಸಿದರು.

ಕರವೇ ಕಾವೇರಿ, ಉತ್ತರ ಕರ್ನಾಟಕ ಹಾಗೂ ಅಖಂಡ ಕರ್ನಾಟಕದ ಹಿತಾಸಕ್ತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು ಅವರು ಹೇಳಿದರು.

ಯತ್ನಾಳ್ ವಿರುದ್ಧ ಭೀಮು ನಾಯಕ್ ಆಕ್ರೋಶ

ಹಿರಿಯರಿಗೆ ಗೌರವ ನೀಡದ ಕಾರಣಕ್ಕೆ ಯತ್ನಾಳ್ ಅವರನ್ನು ಈ ಹಿಂದೆ ಅವರ ಪಕ್ಷದಿಂದಲೇ ಉಚ್ಚಾಟಿಸಲಾಗಿತ್ತು ಎಂದು ಭೀಮು ನಾಯಕ್ ಆರೋಪಿಸಿದರು.

ಮುಂದೆಯೂ ನಾರಾಯಣ ಗೌಡರ ಕುರಿತು ಇದೇ ರೀತಿಯ ಹೇಳಿಕೆಗಳನ್ನು ನೀಡಿದರೆ, ಯತ್ನಾಳ್ ಅವರು ಭೇಟಿ ನೀಡುವ ಜಿಲ್ಲೆಗಳಲ್ಲಿ ಕರವೇ ವತಿಯಿಂದ ಪ್ರತಿಭಟನೆ ನಡೆಸಿ, ಅವರ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸಲಾಗುವುದು. ಅಗತ್ಯವಿದ್ದಲ್ಲಿ ಮುಖಕ್ಕೆ ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಭೀಮು ನಾಯಕ್ ಎಚ್ಚರಿಕೆ ನೀಡಿದರು.

You Might Also Like

Leave a Reply

Your email address will not be published. Required fields are marked *

Suddi Belaku