
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳ ಪರಿಣಾಮವಾಗಿ ಇಂದು ನಾವು ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ. ಅಂತಹ ಮಹನೀಯರ ತ್ಯಾಗವನ್ನು ಸ್ಮರಿಸುವುದು ಮತ್ತು ಅವರ ಆಶಯದಂತೆ ದೇಶವನ್ನು ಮುನ್ನಡೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಭೀಮನಗೌಡ ಕ್ಯಾತ್ನಾಳ ಹೇಳಿದರು.
ನಗರದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಕಛೇರಿಯಲ್ಲಿ ಲಯನ್ಸ್ ಕ್ಲಬ್ ಆಫ್ ಯಾದಗಿರಿ ಸಹಯೋಗದೊಂದಿಗೆ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
“ನಮ್ಮ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ, ಸಂಕಷ್ಟಗಳನ್ನು ಅನುಭವಿಸಿ ನಮಗೆ ಈ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅವರ ಋಣವನ್ನು ತೀರಿಸಲು ನಾವು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು.
ಇಂದು ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಈ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಬಹಳ ಮುಖ್ಯವಾಗಿದೆ. ಗುಣಮಟ್ಟದ ರಸ್ತೆ, ಸೇತುವೆ, ಕಟ್ಟಡ, ನೀರಾವರಿ ಯೋಜನೆಗಳ ಮೂಲಕ ದೇಶದ ಮೂಲಸೌಕರ್ಯವನ್ನು ಬಲಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭ್ರಷ್ಟಾಚಾರ ಮುಕ್ತವಾಗಿ, ಪಾರದರ್ಶಕವಾಗಿ ಕೆಲಸ ಮಾಡುವುದೇ ನಮ್ಮ ನಿಜವಾದ ದೇಶಸೇವೆಯಾಗಲಿದೆ” ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿದ್ಧರಾಜರೆಡ್ಡಿ ಅವರು ಮಾತನಾಡಿ, “ಸ್ವಾತಂತ್ರ್ಯ ಎಂದರೆ ಕೇವಲ ಆಚರಣೆ ಮಾಡುವುದು ಮಾತ್ರವಲ್ಲ. ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಜಾತಿ, ಮತ, ಭಾಷೆಗಳ ಭೇದವನ್ನು ಮರೆತು ನಾವೆಲ್ಲರೂ ಒಂದೇ ಭಾರತೀಯರು ಎಂಬ ಭಾವನೆಯಿಂದ ಕೆಲಸ ಮಾಡಬೇಕು.
ರಾಷ್ಟ್ರದ ಸರ್ವಾಂಗೀಣ ಪ್ರಗತಿಗಾಗಿ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮತ್ತು ಸಾಮಾಜಿಕ ಕಳಕಳಿಯ ಕ್ಷೇತ್ರಗಳಲ್ಲಿ ಲಯನ್ಸ್ ಕ್ಲಬ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಹಿರಿಯರು ಕಂಡ ಕನಸಿನ ‘ಆತ್ಮನಿರ್ಭರ ಭಾರತ’ವನ್ನು ನನಸು ಮಾಡಲು ಯುವಕರು ಮುಂದೆ ಬರಬೇಕು. ಪ್ರತಿಯೊಬ್ಬ ಪ್ರಜೆಯು ದೇಶಪ್ರೇಮ, ಕರ್ತವ್ಯ ಪ್ರಜ್ಞೆ ಮತ್ತು ಶಿಸ್ತಿನಿಂದ ಬದುಕಿದರೆ ಮಾತ್ರ ನಾವು ವಿಶ್ವಗುರು ಆಗಲು ಸಾಧ್ಯ” ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಗೋಳ, ಖಜಾಂಚಿ ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಹಿರಿಯ ಸದಸ್ಯರಾದ ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ, ಮಲ್ಲನಗೌಡ ಹಳಿಮನಿ ಕೌಳೂರ, ಹೇಮಂತಕುಮಾರ ಕಶೆಟ್ಟಿ,ಮುಕುಂದಕುಮಾರ,ಬನ್ನಪ್ಪ,ಬಸವರಾಜ ಕಲಕೇರಿ, ಶರಣರೆಡ್ಡಿ ಹತ್ತಿಕುಣಿ, ದೀಪಕ್ ಯಲಸತ್ತಿ, ಸಚಿನ ಪಾಟೀಲ ಕ್ಯಾತ್ನಾಳ ಸೇರಿದಂತೆ ಎರಡೂ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.












Leave a Reply