
ಸುದ್ದಿ ಬೆಳಕು ವಾರ್ತೆ
ಯಾದಗಿರಿ (ಸೈದಾಪೂರ) : ಸೈದಾಪೂರ ಗ್ರಾಮದ ಮುಖ್ಯ ಬಜಾರ್‌ನಲ್ಲಿರುವ ಅಂಗಡಿಯೊಂದರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 14.47 ಕ್ವಿಂಟಾಲ್ ಪಡಿತರ ಧಾನ್ಯವನ್ನು ಜಪ್ತಿ ಮಾಡಿದ್ದಾರೆ.
ಸಾರ್ವಜನಿಕರಿಗೆ ವಿತರಿಸಬೇಕಿದ್ದ ಪಡಿತರ ಅಕ್ಕಿ ಹಾಗೂ ಜೋಳವನ್ನು ಅಕ್ರಮವಾಗಿ ದಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಯಾದಗಿರಿ ವಲಯ-2ರ ಆಹಾರ ನಿರೀಕ್ಷಕಿ ರಾಜೇಶ್ವರಿ ಡಂಬಾಳ, ತಾಲೂಕು ಆಹಾರ ಶಿರಸ್ತೇದಾರ್ ಮಹೇಶ್ ಹಾಗೂ ವಿಠ್ಠಲ್ ಬಂದಾಳ ಅವರನ್ನೊಳಗೊಂಡ ತಂಡವು ಆಗಸ್ಟ್ 7ರಂದು ಮಧ್ಯಾಹ್ನ 1.10ರ ಸುಮಾರಿಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ದಾಳಿ ನಡೆಸಿದೆ.
ದಾಳಿಯ ವೇಳೆ ಅಂಗಡಿಯಲ್ಲಿ 50 ಕೆ.ಜಿ ತೂಕದ 18 ಚೀಲಗಳಲ್ಲಿ ತುಂಬಿದ್ದ 9.49 ಕ್ವಿಂಟಾಲ್ (949 ಕೆ.ಜಿ) ಪಡಿತರ ಅಕ್ಕಿ ಹಾಗೂ 10 ಚೀಲಗಳಲ್ಲಿ ತುಂಬಿದ್ದ 4.98 ಕ್ವಿಂಟಾಲ್ (498 ಕೆ.ಜಿ) ಜೋಳ ಪತ್ತೆಯಾಗಿದೆ. ಜಪ್ತಿ ಮಾಡಲಾದ ಒಟ್ಟು 14.47 ಕ್ವಿಂಟಾಲ್ ಪಡಿತರ ಧಾನ್ಯದ ಅಂದಾಜು ಮೌಲ್ಯ 40,229 ರೂ. ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಪಡಿತರ ಧಾನ್ಯವನ್ನು ಖಾಸಗಿ ವಾಹನದಲ್ಲಿ ಪೊಲೀಸ್ ಠಾಣೆಯ ಆವರಣಕ್ಕೆ ತರಲಾಗಿದೆ.
ಮಗದಂಪೂರ ಗ್ರಾಮದ ಮೂಲದವನಾಗಿದ್ದು, ಪ್ರಸ್ತುತ ಸೈದಾಪೂರದಲ್ಲಿ ವಾಸವಿರುವ ಅಂಗಡಿ ಮಾಲೀಕ ರಾಜು ಜಲಾಲಸಾಬ್ ದೊಡ್ಡಪ್ಪನೋರ್ (29) ವಿರುದ್ಧ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ (ಕ್ರೈಂ ನಂ: 108/2026) ದಾಖಲಿಸಲಾಗಿದೆ.











Leave a Reply