ವಡಗೇರಾ: ವಸತಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನ

Posted by

ಸುದ್ದಿ ಬೆಳಕು ವಾರ್ತೆ

ವಡಗೇರಾ : ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಆದೇಶದಂತೆ ವಡಗೇರಾ ತಾಲೂಕಿನ ಕಾಡಂಗೇರಾ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷತೆ ಹಾಗೂ ವಿವಿಧ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಕಾರ್ಯಕರ್ತ ಶ್ರೀಪರ್ವತ ರೆಡ್ಡಿ ಎಸ್. ಅವರು ಮಕ್ಕಳ ನಾಲ್ಕು ಮೂಲಭೂತ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆ ಪಡೆಯುವ ಹಕ್ಕು, ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಪ್ರತಿಯೊಬ್ಬ ಮಗುವಿನ ಹಕ್ಕುಗಳನ್ನು ಕಾಪಾಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಮಕ್ಕಳ ಸಹಾಯವಾಣಿ-1098/112 ಜಿಲ್ಲಾ ಸಂಯೋಜಕ ಶರಬಯ್ಯ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 (ತಿದ್ದುಪಡಿ 2016) ಕುರಿತು ಮಾಹಿತಿ ನೀಡಿ, ಬಾಲ್ಯ ವಿವಾಹ ತಡೆಗೆ ಸಾರ್ವಜನಿಕರು ಸಹಕರಿಸುವಂತೆ ಹಾಗೂ ತುರ್ತು ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡುವಂತೆ ಕರೆ ನೀಡಿದರು.

ಬಾಲಕಾರ್ಮಿಕ ನಿರ್ಮೂಲನ ಯೋಜನೆಯ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ಅವರು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 (ತಿದ್ದುಪಡಿ 2016) ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂದು ಹೇಳಿದರು.

ವಡಗೇರಾ ಪೊಲೀಸ್ ಠಾಣೆಯ ಸಿಬ್ಬಂದಿ ಭೀಮರಾಯ ಅವರು ಪೋಕ್ಸೋ ಕಾಯ್ದೆ-2012ರ ಕುರಿತು ಮಾಹಿತಿ ನೀಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಕಾನೂನು ರಕ್ಷಣೆ ಹಾಗೂ ದೂರು ಸಲ್ಲಿಸುವ ವಿಧಾನಗಳ ಕುರಿತು ವಿವರಿಸಿದರು.

ಶಿಕ್ಷಣ ಇಲಾಖೆಯ ಬಿಆರ್‌ಪಿ ವೆಂಕಟೇಶ ಗಡ್ಡದ ಅವರು ಮಕ್ಕಳಲ್ಲಿ ಶಿಸ್ತುಬದ್ಧ ಶಿಕ್ಷಣ, ಉತ್ತಮ ನಡವಳಿಕೆ ಹಾಗೂ ದೈನಂದಿನ ವೈಯಕ್ತಿಕ ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು.

ವಸತಿ ಶಾಲೆಯ ಪ್ರಾಂಶುಪಾಲ ನಾಗರೆಡ್ಡಿ ಅವರು ಶಿಕ್ಷಣವು ಪ್ರತಿಯೊಬ್ಬ ಮಗುವಿನ ಅಮೂಲ್ಯ ಆಸ್ತಿಯಾಗಿದ್ದು, ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ಕಾನೂನುಗಳ ಕುರಿತು ಉಪಯುಕ್ತ ಮಾಹಿತಿ ಪಡೆದರು.

You Might Also Like

Leave a Reply

Your email address will not be published. Required fields are marked *

Suddi Belaku