ಖಾಸಗಿ ಶಾಲಾ ವಾಹನ ಚಾಲಕರಿಗೆ ಕನಿಷ್ಠ ವೇತನ ಸೇರಿ ಮೂಲಸೌಲಭ್ಯ ಕಲ್ಪಿಸಲು ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಕರ್ನಾಟಕ ಚಾಲಕರ ಒಕ್ಕೂಟ, ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಅಧ್ಯಕ್ಷ ಬಸವರಾಜ ಎಂ. ಚಟ್ನಳ್ಳಿ ಅವರ ನೇತೃತ್ವದಲ್ಲಿ ಖಾಸಗಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಖಾಸಗಿ ಶಾಲಾ ವಾಹನ ಚಾಲಕರಿಗೆ ಸರ್ಕಾರದ ನಿಯಮಾನುಸಾರ ಕನಿಷ್ಠ ವೇತನ ನಿಗದಿಪಡಿಸಿ, ಒಂದು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ಚಾಲಕರಿಗೆ ಮಾಸಿಕ ₹15,000 ರಿಂದ ₹20,000 ವೇತನ ನೀಡಬೇಕು ಎಂದು ಒತ್ತಾಯಿಸಲಾಯಿತು.

ಇದರ ಜೊತೆಗೆ ಚಾಲಕರಿಗೆ ಭವಿಷ್ಯ ನಿಧಿ (ಪಿಎಫ್), ನೌಕರರ ರಾಜ್ಯ ವಿಮೆ (ಇಎಸ್‌ಐ), ಅಪಘಾತ ಹಾಗೂ ಜೀವ ವಿಮೆ, ಹಬ್ಬದ ಬೋನಸ್, ಹೆಚ್ಚುವರಿ ಕೆಲಸಕ್ಕೆ ಭತ್ಯೆ, ವೇತನ ಸಹಿತ ರಜೆ ಸೇರಿದಂತೆ ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ವಾಹನ ಚಾಲಕರ ಮಕ್ಕಳಿಗೆ ಅವರು ಸೇವೆ ಸಲ್ಲಿಸುವ ಶಾಲೆಗಳಲ್ಲಿಯೇ ಉಚಿತ ಶಿಕ್ಷಣ ನೀಡಬೇಕು. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ಶಾಲಾ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಇರಬೇಕು. ಚಾಲಕರಿಗೆ ವಿಶ್ರಾಂತಿ ಕೊಠಡಿ, ಶುದ್ಧ ಕುಡಿಯುವ ನೀರು, ಶೌಚಾಲಯ, ಉಚಿತ ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಸಂಚಾರ ನಿಯಮಗಳು, ಮಕ್ಕಳ ಸುರಕ್ಷತೆ ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ನಿಯಮಿತ ತರಬೇತಿ ನೀಡಬೇಕು. ಶಾಲಾ ವಾಹನಗಳ ಫಿಟ್ನೆಸ್, ವಿಮೆ ನವೀಕರಣ ಹಾಗೂ ದುರಸ್ತಿ ವೆಚ್ಚವನ್ನು ಶಾಲಾ ಆಡಳಿತವೇ ಭರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಿದ್ದು ಕಣೇಕಲ್ (ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು, ಶಾಲಾ ವಾಹನ ವಿಭಾಗ), ಸುಭಾಷ್ ಗುತ್ತೇದಾರ (ಪ್ರಚಾರ ಸಮಿತಿ ಉಪಾಧ್ಯಕ್ಷರು), ಸಾಹೇಬ್ ಗೌಡ (ಕಾರ್ಯಾಧ್ಯಕ್ಷರು), ಸಾಬಣ್ಣ ಠಾಣಗುಂದಿ (ಖಜಾಂಚಿ), ರಾಘವೇಂದ್ರ ತಳವಾರ (ಉಪಾಧ್ಯಕ್ಷರು), ಹಣಮಂತ ಕುಲೂರ್ (ಸಂಘಟನೆ ಕಾರ್ಯಾಧ್ಯಕ್ಷರು), ಮರಲಿಂಗ ಮುಂಡರಗಿ (ತಾಲೂಕು ಕಾರ್ಯದರ್ಶಿ), ಮಹೇಬೂಬ್ (ತಾಲೂಕು ಸದಸ್ಯರು), ಸಲೀಂ (ಸಹ ಕಾರ್ಯದರ್ಶಿ), ಸೋಫಿ ಪಟೇಲ್ (ಸಂಘಟನೆ ಕಾರ್ಯದರ್ಶಿ), ಚಂದ್ ಪಾಶ, ಸುರೇಶ್ ಆರ್.ವಿ. (ಸದಸ್ಯರು), ರವಿ ಮುದ್ನಾಳ್ (ಗೌರವಾಧ್ಯಕ್ಷರು) ಹಾಗೂ ಸಾಬು ನಾಯಕ ಠಾಣಗುಂದಿ (ಜಿಲ್ಲಾಧ್ಯಕ್ಷರು, ಶಾಲಾ ವಾಹನ ವಿಭಾಗ) ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku