ಮನೆ ಮನೆಗಳಲ್ಲಿ ಯೋಗದ ಜ್ಯೋತಿ ಬೆಳಗಲಿ: ಭವರಲಾಲ್ ಆರ್ಯ ಕರೆ

Posted by

ಯೋಗವೇ ಆರೋಗ್ಯವಂತ ಸಮಾಜದ ಅಡಿಪಾಯ; ಅಡ್ವಾನ್ಸ್ ಯೋಗ ಶಿಕ್ಷಕರ ತರಬೇತಿ ಶಿಬಿರ ಸಮಾರೋಪ ಸಮಾರಂಭ

ಸುದ್ದಿ ಬೆಳಕು ವಾರ್ತೆ

ಯಾದಗಿರಿ: “ಯೋಗವು ಕೇವಲ ದೇಹವನ್ನು ಸದೃಢಗೊಳಿಸುವ ವ್ಯಾಯಾಮವಲ್ಲ. ಅದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸುವ ಜೀವನ ಪದ್ಧತಿಯಾಗಿದೆ. ಪ್ರತಿಯೊಂದು ಮನೆ ಯೋಗಮಯವಾದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಆದ್ದರಿಂದ ‘ಮನೆ ಮನೆಗಳಲ್ಲಿ ಯೋಗದ ಜ್ಯೋತಿ ಬೆಳಗುವ ಸಂಕಲ್ಪವನ್ನು’ ಎಲ್ಲರೂ ಕೈಗೊಳ್ಳಬೇಕು” ಎಂದು ಪತಂಜಲಿ ಯೋಗ ಸಮಿತಿ ಕರ್ನಾಟಕದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಕರೆ ನೀಡಿದರು.

ಯಾದಗಿರಿ ನಗರದಲ್ಲಿ ಆಯೋಜಿಸಲಾಗಿದ್ದ ಅಡ್ವಾನ್ಸ್ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಭಾನುವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗವು ಇಂದಿನ ಒತ್ತಡದ ಜೀವನಶೈಲಿಯಲ್ಲಿ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು ಎಂದು ಹೇಳಿದರು. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಮತ್ತು ಆತ್ಮಶಕ್ತಿಯನ್ನು ಬೆಳೆಸುವ ಸಾಮರ್ಥ್ಯ ಯೋಗಕ್ಕಿದೆ ಎಂದು ತಿಳಿಸಿದರು.

ಯೋಗದ ಮಹತ್ವವನ್ನು ವಿವರಿಸಿದ ಅವರು, ಓಂಕಾರ ಉಚ್ಚಾರಣೆಯು ದೇಹದಲ್ಲಿನ ಸುಮಾರು 33 ಟ್ರಿಲಿಯನ್ ಜೀವಕೋಶಗಳನ್ನು ಜಾಗೃತಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ಯೋಗಶಾಸ್ತ್ರದಲ್ಲಿ ವಿವರಿಸಲಾಗಿದೆ. ನಿಯಮಿತವಾಗಿ ಓಂಕಾರ ಜಪ ಮಾಡುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುವುದರ ಜೊತೆಗೆ ಧನಾತ್ಮಕ ಚಿಂತನೆ ಬೆಳೆಯುತ್ತದೆ ಎಂದರು.

ಸಾಮೂಹಿಕವಾಗಿ ಏಕಕಾಲದಲ್ಲಿ ಓಂಕಾರ ಉಚ್ಚಾರಣೆ ಮಾಡಿದಾಗ ಅದರ ನಾದದಿಂದ ವಿಶೇಷ ಶಕ್ತಿ ಉಂಟಾಗಿ, ಎಲ್ಲರಲ್ಲೂ ಹೊಸ ಚೈತನ್ಯ, ಉತ್ಸಾಹ ಮತ್ತು ಮಾನಸಿಕ ಏಕಾಗ್ರತೆ ವೃದ್ಧಿಯಾಗುತ್ತದೆ. ಓಂಕಾರದ ನಾದವು ವ್ಯಕ್ತಿಯೊಳಗಿನ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ಹೇಳಿದರು.

ಯೋಗ ಶಿಕ್ಷಕರು ಕೇವಲ ಆಸನಗಳನ್ನು ಕಲಿಸುವವರಾಗಿರದೆ, ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ದೂತರಾಗಬೇಕು. ಪ್ರತಿಯೊಬ್ಬ ಯೋಗ ಶಿಕ್ಷಕರು ಯೋಗದ ಯಮ-ನಿಯಮಗಳನ್ನು ತಮ್ಮ ಜೀವನದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾತ್ವಿಕ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಸ್ವದೇಶಿ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಯೋಗದ ಮೂಲಕ ಪ್ರತಿಯೊಂದು ಮನೆ, ಶಾಲೆ ಹಾಗೂ ಗ್ರಾಮಗಳಲ್ಲಿ ಆರೋಗ್ಯದ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಮುಂದಿನ ಒಂದು ವರ್ಷದೊಳಗೆ ಯಾದಗಿರಿ ನಗರದ ಎಲ್ಲಾ 31 ವಾರ್ಡ್‌ಗಳಲ್ಲೂ ಯೋಗ ತರಬೇತಿ ಕೇಂದ್ರಗಳು ಆರಂಭವಾಗುವಂತೆ ಪ್ರತಿಯೊಬ್ಬ ಯೋಗ ಶಿಕ್ಷಕರು ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.

ಈ ವೇಳೆ ಯೋಗಗುರು ಬಾಬಾ ರಾಮದೇವ ಅವರ ದೇಶಭಕ್ತಿಯನ್ನು ಸ್ಮರಿಸಿದ ಭವರಲಾಲ್ ಆರ್ಯ, “ವಿದೇಶದ ಒಂದು ಸಂಸ್ಥೆ ಬಾಬಾ ರಾಮದೇವ ಅವರಿಗೆ ತಮ್ಮ ದೇಶಕ್ಕೆ ಬಂದು ದೊಡ್ಡ ಯೋಗ ಮಠ ಸ್ಥಾಪಿಸುವಂತೆ ಹಾಗೂ ವಿಶೇಷ ವಿಮಾನದ ಸೌಲಭ್ಯ ಒದಗಿಸುವುದಾಗಿ ಆಹ್ವಾನಿಸಿತ್ತು. ಆದರೆ, ‘ನಾನು ನೂರು ಜನ್ಮ ಪಡೆದರೂ ಭಾರತದಲ್ಲಿಯೇ ಇರುತ್ತೇನೆ’ ಎಂದು ಅವರು ದೇಶಪ್ರೇಮದಿಂದ ಆ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದರು. ಇದು ನಮ್ಮೆಲ್ಲರಿಗೂ ಸ್ವದೇಶಾಭಿಮಾನದ ಆದರ್ಶವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ಪ್ರಾಯೋಗಿಕ ತರಬೇತಿಯನ್ನು ನೀಡಿ, ಆರೋಗ್ಯಕರ ಜೀವನದಲ್ಲಿ ಯೋಗದ ಪಾತ್ರವನ್ನು ವಿವರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ತರಬೇತಿ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿವಿಧ ಯೋಗ ಪ್ರದರ್ಶನಗಳು ಹಾಗೂ ಪ್ರಾತ್ಯಕ್ಷಿಕೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಕಾರ್ಯಕ್ರಮದಲ್ಲಿ ಮಹಿಳಾ ಯೋಗ ಸಮಿತಿ ಪ್ರಭಾರಿ ಶ್ರೀದೇವಿ, ಬಸವಯೋಗ ಟ್ರಸ್ಟ್‌ನ ಸೋಮನಾಥ್ ರೆಡ್ಡಿ, ಅನಿಲ್ ಗುರೂಜಿ, ಜ್ಞಾನೇಶ್ವರ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಭೀಮಶಪ್ಪ, ಹನುಮಯ್ಯ, ಪುರುಷೋತ್ತಮ ಹಾಗೂ ಸಂತೋಷಕುಮಾರ ನೌಡಿ ಅವರಿಗೆ ವಿಶೇಷ ಅಭಿನಂದನಾ ಪ್ರಮಾಣಪತ್ರಗಳನ್ನು ಪ್ರದಾನಿಸಲಾಯಿತು.

ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಯೋಗ ಶಿಕ್ಷಕರು, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು, ಈಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಉಪನ್ಯಾಸಕಿ ಜ್ಯೋತಿಲತಾ ತಡಿಬಿಡಿಮಠ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಭೀಮಶಪ್ಪ ಸ್ವಾಗತಿಸಿ, ಹನುಮಯ್ಯ ವಂದಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku