ಕನಕದಾಸರ ಸಮಾನತೆ ಸಂದೇಶ ಇಂದಿಗೂ ಪ್ರಸ್ತುತ: ಅಯ್ಯಮ್ಮ ಎನ್. ಪಾಟೀಲ್

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ : ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆ, ದೋರನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶಹಾಪುರದ ಶ್ರೀ ವಿದ್ಯಾನಿಧಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ‘ಕನಕ ದರ್ಶನ’ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಅಯ್ಯಮ್ಮ ಎನ್. ಪಾಟೀಲ್, ಇಂದಿಗೂ ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ಮುಂದುವರಿದಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಕನಕದಾಸರ ಕಾವ್ಯಗಳಲ್ಲಿ ಅಡಕವಾಗಿರುವ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಮಾಜ ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ವ್ಯಾಸರಾಯರ ಶಿಷ್ಯರಾಗಿದ್ದ ಕನಕದಾಸರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು, ಇಂದಿನ ಯುವಜನತೆ ಅವರ ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

‘ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ’

ಮಹಾವಿದ್ಯಾಲಯದ ಪ್ರಾಂಶುಪಾಲ ಮಹೇಶ್ ಪೂಜಾರಿ ಮಾತನಾಡಿ, ಯುದ್ಧದ ಭೀಕರತೆಯಿಂದ ಬೇಸತ್ತು ಅಧಿಕಾರ ತ್ಯಜಿಸಿ ಸಂತರಾದ ಕನಕದಾಸರು ತಮ್ಮ ಕವಿತೆಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಅವರ ವೈಚಾರಿಕ ಚಿಂತನೆಗಳು ಹಾಗೂ ದಾಸ ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಮಾಜ ವಿಭಜನೆಯಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂಬ ಕನಕದಾಸರ ಆಶಯವನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು ಎಂದು ಅವರು ಕರೆ ನೀಡಿದರು.

ಮಾನವೀಯ ಮೌಲ್ಯಗಳ ಸಂದೇಶ

ಜ್ಯೋತಿರ್ಗಮಯ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ್ ಪತ್ತಾರ ಮಾತನಾಡಿ, ಕನಕದಾಸರು ತಮ್ಮ ದಾಸಪದಗಳು, ಕೀರ್ತನೆಗಳು ಮತ್ತು ಗಾಯನದ ಮೂಲಕ ಸಮಾಜದಲ್ಲಿ ಸಮಾನತೆ, ಪ್ರೀತಿ, ವಿಶ್ವಾಸ ಹಾಗೂ ಮಾನವೀಯತೆಯ ಸಂದೇಶ ಸಾರಿದರು. ದಮನಿತರು ಮತ್ತು ಶೋಷಿತವರ ಪರವಾಗಿ ಧ್ವನಿಯೆತ್ತಿದ ಅವರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಕನಕದಾಸರು ಪ್ರತಿಪಾದಿಸಿದ ಜಾತ್ಯತೀತ ತತ್ವದ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು. ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಬದಲು ಮನುಷ್ಯತ್ವದ ಮೌಲ್ಯಗಳನ್ನು ಬೆಳೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಣಮಂತ್ರಾಯ ದೇಸಾಯಿ, ಶಿವುರೆಡ್ಡಿ ಎನ್. ಪಾಟೀಲ್, ಸಲೀಂ ಪಾಶಾ, ಯುವ ಸಾಹಿತಿ ಸಾಯಿಬಣ್ಣ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಗಂಗಾ ಮತ್ತು ಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಆಫ್ರೀನಾ ಬೇಗಂ ಪ್ರಾರ್ಥಿಸಿದರು. ನಾಗರತ್ನ ವಂದಿಸಿದರು. ಸಂಜನಾ ಮತ್ತು ಸಂಗಡಿಗರು ಕನಕದಾಸರ ವೈಚಾರಿಕ ಗೀತೆಗಳನ್ನು ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

Leave a Reply

Your email address will not be published. Required fields are marked *

Suddi Belaku