‘ಸಂಸತ್ ಚಲೋ’ ರಾಜಕೀಯ ಷಡ್ಯಂತ್ರ: ಕಾಂಗ್ರೆಸ್ ವಿರುದ್ಧ ಬಿಜೆಪಿ ಯುವ ಮೋರ್ಚಾ ವಾಗ್ದಾಳಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ‘ಸಂಸತ್‌ ಚಲೋ’ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಹೆಸರಿನಲ್ಲಿ ಆರಂಭವಾದ ಹೋರಾಟವನ್ನು ಕೆಲವರು ತಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಜನಬೆಂಬಲವಿಲ್ಲದ ಪ್ರತಿಭಟನೆಯನ್ನು ದೊಡ್ಡದಾಗಿ ಬಿಂಬಿಸಲು ಉದ್ದೇಶಪೂರ್ವಕವಾಗಿ ಪ್ರಚೋದನೆ, ಗೊಂದಲ ಮತ್ತು ಗಲಭೆ ಸೃಷ್ಟಿಸಲಾಗುತ್ತಿದೆ. ನಂತರ ಮಾಧ್ಯಮಗಳ ಮುಂದೆ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಪ್ರತಿಭಟನೆಯ ಹಿಂದೆ ಯಾರದೋ ಕೈವಾಡವಿದೆ ಸಂಸತ್ ಅಧಿವೇಶನದಂತಹ ಮಹತ್ವದ ಸಂದರ್ಭದಲ್ಲಿ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕಾಣದ ಕೈಗಳಿವೆಯೇ? ಇದರ ಹಣಕಾಸಿನ ಮೂಲವೇನು? ಪ್ರತಿಭಟನಾಕಾರರಿಗೆ ವಿದೇಶಿ ರಾಜತಾಂತ್ರಿಕ ವಲಯಗಳೊಂದಿಗೆ ಯಾವುದೇ ನಂಟಿದೆಯೇ? ಎಂಬುದನ್ನು ತನಿಖೆ ಮಾಡಬೇಕು ಎಂದು ಶ್ರೀಧರ ಸಾಹುಕಾರ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಹೋರಾಟವೆಂದು ಹೇಳಿಕೊಂಡು ಆರಂಭಿಸಿದ ಪ್ರತಿಭಟನೆ ಕ್ರಮೇಣ ರಾಜಕೀಯ ವೇದಿಕೆಯಾಗಿ ಮಾರ್ಪಟ್ಟಿದೆ. ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹಾಗೂ ದೇಶವಿರೋಧಿ ಘೋಷಣೆಗಳು ಕೇಳಿಬಂದಿರುವ ಆರೋಪಗಳಿದ್ದರೆ, ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಕಾನೂನು ತನ್ನ ಕೆಲಸ ಮಾಡುತ್ತಿದೆ; ರಾಜಕೀಯ ನಾಟಕ ಏಕೆ?” ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳು ಜೈಲಿನಲ್ಲಿದ್ದಾರೆ. ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತಿರುವಾಗ, ರಾಜಕೀಯ ಲಾಭಕ್ಕಾಗಿ ವಿಷಯವನ್ನು ಬಳಸಿಕೊಳ್ಳುವುದು ಸಿಜೆಪಿ ಮತ್ತು ಕಾಂಗ್ರೆಸ್ ಇತರ ವಿರೋಧ ಪಕ್ಷಗಳ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿರಲಿಲ್ಲವೇ? ಕಾಂಗ್ರೆಸ್ ನಾಯಕರು ಒಂದು ಬಾರಿ Googleನಲ್ಲಿ ಚೆಕ್ ಮಾಡಿಕೊಳ್ಳಿ ಎಂದು ಪ್ರಶ್ನಿಸಿರುವ ಶ್ರೀಧರ ಸಾಹುಕಾರ, ಹಿಂದಿನ ಹಲವು ಪ್ರಕರಣಗಳನ್ನು ವಿವರಿಸಿದರು 2004 – AIPMT ಪ್ರಶ್ನೆಪತ್ರಿಕೆ ಸೋರಿಕೆ. 2006 – AIIMS ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಪತ್ರಿಕೆ ಸೋರಿಕೆ. 2007 – AIEEE ಪ್ರಶ್ನೆಪತ್ರಿಕೆ ಸೋರಿಕೆ. 2011 – AIEEE ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳ ಆರೋಪ. 2012 – AIIMS ಪ್ರವೇಶ ಪರೀಕ್ಷೆ ಕುರಿತ ಗಂಭೀರ ಆರೋಪಗಳು. 2014 – CBSE 10ನೇ ತರಗತಿ ಗಣಿತ ಹಾಗೂ 12ನೇ ತರಗತಿ ಅರ್ಥಶಾಸ್ತ್ರದ ಪ್ರಶ್ನೆಪತ್ರಿಕೆ ಸೋರಿಕೆ.

“ಹಿಂದಿನ ಅವಧಿಯಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಆದರೆ ಇಂದು ಕಾನೂನು ತನ್ನ ಕೆಲಸ ಮಾಡುತ್ತಿರುವಾಗ, ರಾಜಕೀಯ ಲಾಭಕ್ಕಾಗಿ ಪ್ರತಿಭಟನೆಗಳ ಹೆಸರಿನಲ್ಲಿ ದೇಶದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳಾಗಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಶಿಕ್ಷಣದಂತಹ ಮಹತ್ವದ ಕ್ಷೇತ್ರವನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ.

ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಗೈದು ರಾಜಕೀಯ ಮಾಡುವವರಿಗೆ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ದೇಶದ ಸಾರ್ವಭೌಮತೆ, ಸಂಸತ್ತಿನ ಗೌರವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಬಿಜೆಪಿ ಯುವಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಶ್ರೀಧರ ಸಾಹುಕಾರ ಎಚ್ಚರಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku