ಕನಕದಾಸರ ಸಾಹಿತ್ಯ ಸಮಾಜಕ್ಕೆ ದಾರಿದೀಪ: ಡಾ. ಶಿವಶಂಕರ

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ: ಸಮಾಜದಲ್ಲಿ ಗುಣಕ್ಕಿಂತ ಕುಲವೇ ಮುಖ್ಯ ಎಂದು ಬೀಗುವವರಿಗೆ ಕನಕದಾಸರು ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ದುರ್ಜನರ ಸಂಗವನ್ನು ತೊರೆದು ಸದಾ ಸಜ್ಜನರ ಸಂಗದಲ್ಲೇ ಬದುಕಬೇಕು ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಬೇವಿನಹಳ್ಳಿಯ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಶಂಕರ ಹೇಳಿದರು.

ತಾಲೂಕಿನ ಬೇವಿನಹಳ್ಳಿ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕನಕದರ್ಶನ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು “ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಪ್ರಶ್ನಿಸುವ ಮೂಲಕ ಗುಣವೇ ಮುಖ್ಯ, ಕುಲವಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ಅವರ ಸಾಹಿತ್ಯ ಇಂದಿನ ಸಮಾಜಕ್ಕೂ ಆದರ್ಶ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕನಕದಾಸರ ಬದುಕು ಆದರ್ಶ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಷೇತ್ರ ಸಹಾಯಕ ಸುರೇಶ್‌ಕುಮಾರ್ ಉಪನ್ಯಾಸ ನೀಡಿ, ಕನಕದಾಸರ ಜೀವನ ಮತ್ತು ಕಾವ್ಯಗಳು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವ ಅಮೂಲ್ಯ ಸಂಪತ್ತಾಗಿವೆ ಎಂದು ಹೇಳಿದರು.

ಸಾಮಾಜಿಕ ಸಮಾನತೆ, ಧರ್ಮೋದ್ಧಾರ ಹಾಗೂ ವ್ಯಕ್ತಿತ್ವ ವಿಕಸನಕ್ಕಾಗಿ ಕನಕದಾಸರು ಶ್ರಮಿಸಿದರು. ಸಮಾಜದಲ್ಲಿದ್ದ ಅಸಮಾನತೆ, ಅಂಧಶ್ರದ್ಧೆ ಮತ್ತು ಅನ್ಯಾಯಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದುವ ಪ್ರಯತ್ನ ನಡೆಸಿ, ನೈತಿಕ ಬದುಕಿನ ದಾರಿಯನ್ನು ತೋರಿಸಿದರು ಎಂದು ವಿವರಿಸಿದರು.

ಕೀರ್ತನೆ, ಉಗಾಭೋಗ, ಸುಳಾದಿ, ದಂಡಕಗಳ ಜೊತೆಗೆ ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ಹರಿಭಕ್ತಿಸಾರ ಮತ್ತು ನೃಸಿಂಹಸ್ತವ ಮೊದಲಾದ ಕೃತಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತಕವಿ ಕನಕದಾಸರು ಎಂದು ಹೇಳಿದರು.

ಢಾಂಭಿಕತೆಯನ್ನು ಖಂಡಿಸಿದ ಕನಕದಾಸರು

ಉಪನ್ಯಾಸಕ ಮುತ್ತಪ್ಪ ಕಟ್ಟಿಮನಿ ಮಾತನಾಡಿ, ಕನಕದಾಸರು ಅಹಂಕಾರ, ಢಾಂಭಿಕತೆ ಹಾಗೂ ಕಪಟ ಆಚರಣೆಗಳನ್ನು ತಮ್ಮ ಸಾಹಿತ್ಯದ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ. ಭಕ್ತಿಯಿಲ್ಲದೆ ಕೇವಲ ಬಾಹ್ಯ ಆಚರಣೆಗಳಿಗೆ ಮಹತ್ವ ನೀಡುವವರನ್ನು ಅವರು ಕಟುವಾಗಿ ಟೀಕಿಸಿದ್ದಾರೆ ಎಂದು ಹೇಳಿದರು.

“ತೀರ್ಥ ಹಿಡಿದವರೆಲ್ಲ ತಿರುಮಾನದಾರಿಗಳೇ?” ಎಂಬ ಪ್ರಶ್ನೆಯ ಮೂಲಕ ನಿಜವಾದ ಭಕ್ತಿ ಮತ್ತು ಸತ್ಪ್ರವೃತ್ತಿಯ ಮಹತ್ವವನ್ನು ಕನಕದಾಸರು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ಕನಕ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು

ಜ್ಯೋತಿರ್ಗಮಯ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ್ ಪತ್ತಾರ ಮಾತನಾಡಿ, ಕನಕದಾಸರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು ಬೀಜಮಂತ್ರದಂತೆ ಅಡಗಿವೆ. “ಹೃದಯ ಹೊಲವನು ಮಾಡಿ, ತನುವ ನೇಗಿಲು ಮಾಡಿ” ಎಂಬ ಅವರ ಚಿಂತನೆ ಲೋಕಕಲ್ಯಾಣದ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು.

ಗೀತಗಾಯನ

ಕಾರ್ಯಕ್ರಮದಲ್ಲಿ ಯುವ ಗಾಯಕಿಯರಾದ ಸಾವಿತ್ರಿ ಹಾಗೂ ವೈಷ್ಣವಿ ಅವರು ಕನಕದಾಸರ ಕೀರ್ತನೆಗಳನ್ನು ಹಾಡಿ ನೆರೆದವರ ಮೆಚ್ಚುಗೆ ಪಡೆದರು.

ಈ ಸಂದರ್ಭದಲ್ಲಿ ಸುರೇಶ್‌ಕುಮಾರ್, ಮುತ್ತಪ್ಪ ಕಟ್ಟಿಮನಿ, ರಮೇಶರೆಡ್ಡಿ, ಯುವ ಸಾಹಿತಿ ಮಾಳಪ್ಪ ಪೂಜಾರಿ, ಯುವ ಕವಿ ಸಾಯಿಬಣ್ಣ ಪೂಜಾರಿ ಸೇರಿದಂತೆ ಹಲವು ಗಣ್ಯರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku