ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರ ಕೊಡುಗೆ ಅಪಾರ: ಅನಸೂಯಾ ಛಲವಾದಿ

Posted by

ದೋರನಹಳ್ಳಿಯಲ್ಲಿ ‘ಕನಕ ದರ್ಶನ’ ಉಪನ್ಯಾಸ ಕಾರ್ಯಕ್ರಮ

ಸುದ್ದಿ ಬೆಳಕು ವಾರ್ತೆ

ದೋರನಹಳ್ಳಿ : ಕನಕದಾಸರ ಸಾಧಕ ಜೀವನ ಕೇವಲ ಚರಿತ್ರೆಯ ವಿಷಯವಲ್ಲ, ಅದು ಕನ್ನಡ ನಾಡಿನ ಅಸ್ಮಿತೆಯಾಗಿದ್ದು, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಪ್ರಗತಿಪರ ಚಿಂತಕಿ ಅನಸೂಯಾ ಛಲವಾದಿ ಹೇಳಿದರು.

ತಾಲೂಕಿನ ದೋರನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕನಕ ದರ್ಶನ’ ಉಪನ್ಯಾಸ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

‘ರಾಮಧಾನ್ಯ ಚರಿತ್ರೆ’ ಕೃತಿಯ ಮೂಲಕ ಕನಕದಾಸರು ಸಮಾಜದ ನೊಂದ ವರ್ಗಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದು, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ-ಕವಿಯಾಗಿದ್ದಾರೆ ಎಂದು ಹೇಳಿದರು.

ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಗೋರಖನಾಥ ಪತಂಗೆ ಮಾತನಾಡಿ, ಇಂದಿನ ಯುವ ಪೀಳಿಗೆ ಕನಕದಾಸರಂತಹ ಮಹನೀಯರ ಜೀವನವನ್ನು ಅಧ್ಯಯನ ಮಾಡಿ, ಕಷ್ಟಗಳನ್ನು ಎದುರಿಸುವ ಧೈರ್ಯ ಹಾಗೂ ಸಾಧನೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸಕ ನಾಗಪ್ಪ ಹಡಪದ ಮಾತನಾಡಿ, ಸಮಾಜದಲ್ಲಿದ್ದ ಅಸಮಾನತೆ ಮತ್ತು ಅಂಧಕಾರವನ್ನು ದೂರ ಮಾಡಲು ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರಿದರು ಎಂದು ಹೇಳಿದರು.

ಉಪನ್ಯಾಸಕ ಅಣ್ಣರಾವ ಮಾತನಾಡಿ, ಕನಕದಾಸರು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ದಾರ್ಶನಿಕ, ಶ್ರೇಷ್ಠ ಕವಿ ಹಾಗೂ ಭಕ್ತಿಯ ಪರಂಪರೆಯ ಅಪೂರ್ವ ವ್ಯಕ್ತಿತ್ವ ಎಂದು ಬಣ್ಣಿಸಿದರು.

ಜ್ಯೋತಿರ್ಗಮಯ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ್ ಪತ್ತಾರ ಮಾತನಾಡಿ, ಕನಕದಾಸರು ಜಾತಿ-ಮತ ಭೇದಗಳನ್ನು ಮೀರಿ ಮಾನವೀಯತೆ, ಸಹಬಾಳ್ವೆ ಮತ್ತು ಸಮಾನತೆಯ ಸಂದೇಶ ಸಾರಿದವರು. ಅವರ ಕೀರ್ತನೆಗಳು ಸಮಾಜದಲ್ಲಿ ತಾರತಮ್ಯ ನಿವಾರಣೆಗೆ ಇಂದಿಗೂ ಪ್ರೇರಣೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶರಣಬಸವ ಮತ್ತು ರಮೇಶ್ ಕನಕದಾಸರ ಕೀರ್ತನೆಗಳನ್ನು ಹಾಡಿದರು. ರವಿಕುಮಾರ ಕಾರ್ಯಕ್ರಮ ನಿರೂಪಿಸಿ, ಶರಣು ವಂದಿಸಿದರು.

“ಕನಕದಾಸರ ಚಿಂತನೆ ಮತ್ತು ಆದರ್ಶ ಸಂದೇಶಗಳು ಸಾರ್ವಕಾಲಿಕವಾಗಿವೆ. ವಿದ್ಯಾರ್ಥಿಗಳು ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.”
ಗೋರಖನಾಥ ಪತಂಗೆ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೋರನಹಳ್ಳಿ.

You Might Also Like

Leave a Reply

Your email address will not be published. Required fields are marked *

Suddi Belaku