ರಾಯಚೂರಿನ ಅಭಿವೃದ್ಧಿಗೆ ನವಲಿ ಜಲಾಶಯ, ಏಮ್ಸ್ ಅನಿವಾರ್ಯ: ಕೆ. ಶಿವನಗೌಡ ನಾಯಕ

Posted by

ಸುದ್ದಿ ಬೆಳಕು ವಾರ್ತೆ

ರಾಯಚೂರು (ಕವಿತಾಳ): ಕಳೆದ 25 ವರ್ಷಗಳಿಂದ ಮಾನ್ವಿ, ಸಿರವಾರ ಹಾಗೂ ರಾಯಚೂರು ಭಾಗದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕೊರತೆಯಿದ್ದು, ಈ ಭಾಗದ ನೀರಾವರಿ ಸಮಸ್ಯೆ ನಿವಾರಣೆಗೆ ತುಂಗಭದ್ರಾ ನದಿಗೆ ನವಲಿ ಜಲಾಶಯ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ. ಶಿವನಗೌಡ ನಾಯಕ ಹೇಳಿದರು.

ಕೆಎಸ್‌ಎನ್ ಜನಕಲ್ಯಾಣ ಸಮಿತಿ ವತಿಯಿಂದ ಅವರ 49ನೇ ಜನ್ಮದಿನದ ಅಂಗವಾಗಿ ಕವಿತಾಳ ಪಟ್ಟಣದಲ್ಲಿ ಆಯೋಜಿಸಿದ್ದ ಸಮಗ್ರ ನೀರಾವರಿ, ನವಲಿ ಜಲಾಶಯ ನಿರ್ಮಾಣ, ತಿಂಥಿಣಿ ಸೇತುವೆ ಬಳಿ ಜಲಾಶಯ ನಿರ್ಮಾಣ ಹಾಗೂ ರಾಯಚೂರಿಗೆ ಏಮ್ಸ್ ಮಂಜೂರಾತಿ ಕುರಿತ ಸಂಕಲ್ಪ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವಲಿ ಜಲಾಶಯ ನಿರ್ಮಾಣವಾದರೆ ಈ ಭಾಗದಲ್ಲಿ ಎರಡು ಬೆಳೆಗಳಿಗೆ ನೀರಿನ ಲಭ್ಯತೆ ದೊರೆಯಲಿದ್ದು, ರೈತರ ಬದುಕು ಹಸನಾಗುವುದರ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೂ ವೇಗ ಸಿಗಲಿದೆ ಎಂದು ತಿಳಿಸಿದರು.

ತಮ್ಮ ಜನ್ಮದಿನವನ್ನು ವೈಯಕ್ತಿಕ ಸಂಭ್ರಮವಾಗಿ ಆಚರಿಸದೇ, ರೈತರ ಮತ್ತು ಜನಸಾಮಾನ್ಯರ ಸಂಕಷ್ಟ ಪರಿಹಾರಕ್ಕಾಗಿ ಸಂಕಲ್ಪ ಮಾಡುವ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಅನ್ನದಾತರ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಸಮಗ್ರ ನೀರಾವರಿ ಯೋಜನೆಗಳು ಜಾರಿಯಾಗಬೇಕು. ಇದಕ್ಕೆ ಕರ್ನಾಟಕದ ಜೊತೆಗೆ ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶ ಹಾಗೂ ಕೇಂದ್ರ ಸರ್ಕಾರದ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.

ಕೃಷ್ಣಾ ನದಿಗೆ ತಿಂಥಿಣಿ ಸೇತುವೆ ಬಳಿ ಜಲಾಶಯ ನಿರ್ಮಾಣವಾದರೆ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿವರೆಗೂ ನೀರು ಒದಗಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕಳೆದ ಸುಮಾರು 1,500 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಜಿಲ್ಲೆಯ ಜನರಿಗೆ ಉನ್ನತ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕಾದರೆ ಏಮ್ಸ್ ಮಂಜೂರಾಗಲೇಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಗೌರಿಗದ್ದೆಯ ಅವಧೂತ ವಿನಯ ಗುರೂಜಿಯವರನ್ನು ಆಹ್ವಾನಿಸಿದ್ದು, ಅವರ ಆಶೀರ್ವಾದದಿಂದ ಜನರ ಸಂಕಲ್ಪಗಳು ಈಡೇರಲಿ ಎಂಬ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾದಯ್ಯ ಗುರುವಿನ್ ತುರುವಿಹಾಳ ಮಾತನಾಡಿ ನಮ್ಮ ಭಾಗದ ಶಾಶ್ವತ ಅಭಿವೃದ್ಧಿಗಾಗಿ ನವಲಿ ಜಲಾಶಯ ಹಾಗೂ ತಿಂಥಣಿ ಬ್ರಿಜ್ ಬಳಿ ಜಲಾಶಯ ನಿರ್ಮಾಣವಾಗಲೇ ಬೇಕಾಗಿದೆ, ಜಗದ ಜೀವ ಅನ್ನದಾತ,ಮನುಷ್ಯ ಅನ್ನವಿಲ್ಲದೆ ಬದುಕಲು ಸಾಧ್ಯವಿಲ್ಲ ರೈತರಿಗೆ ಉಪಕಾರಿಯಾಗುವಂತಹ ಕಾರ್ಯ ಮಾಡಬೇಕಾಗಿದೆ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಶಿವನಗೌಡ ನಾಯಕ ಅವರು ಸಮಗ್ರ ನೀರಾವರಿಗಾಗಿ ತಮ್ಮ ಹುಟ್ಟುಹಬ್ಬವನ್ನೇ ಸಮರ್ಪಣೆ ಮಾಡಿದ್ದಾರೆ ಇದು ಇಲ್ಲಿಗೆ ನಿಲ್ಲಬಾರದು ಮುಂದೆ ಜಲಾಶಯಗಳು ನಿರ್ಮಾಣವಾಗುವವರೆಗೂ ಕೂಡ ಸಂಕಲ್ಪ ಮುಂದುವರಿಯಬೇಕು, ಈಗಾಗಲೇ ತುಂಗಭದ್ರಾ ನದಿಯಲ್ಲಿ ಹೂಳು ಎತ್ತುವ ಕಾರ್ಯಾಗಬೇಕು ಊಳು ತುಂಬಿ ಹೋಗಿದೆ ಶೇಖರಣೆ ಆಗದೆ ಸಮುದ್ರಕ್ಕೆ ನೀರು ಹೋಗುತ್ತಿದೆ ಇವೆಲ್ಲದಕ್ಕೂ ಸರ್ಕಾರಗಳು ಗಮನ ಹರಿಸಬೇಕು ಆಗಿದ್ದಾಗ ಮಾತ್ರ ರೈತರು ಬದುಕುತ್ತಾರೆ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಮಾದಯ ಗುರುವಿನ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಕಳಸ, ಜನರ ಕಲ್ಯಾಣಕ್ಕಾಗಿ ಏಮ್ಸ್ ಸ್ಥಾಪನೆಗೆ ಕಂಕಣಬದ್ಧರಾಗಿ ಹೋರಾಟ ನಡೆಸುತ್ತಿರುವ ಕೆ. ಶಿವನಗೌಡ ನಾಯಕರಿಗೆ ಜಿಲ್ಲೆಯ ಜನತೆ ಬೆಂಬಲವಾಗಿ ನಿಲ್ಲಬೇಕು, ನಮ್ಮ ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ಮುಖಂಡರು ಯಾರು ಕೂಡ ಏಮ್ಸ್ ಗಾಗಿ ಹಾಗೂ ಸಮಗ್ರ ನೀರಾವರಿಗಾಗಿ ಧ್ವನಿ ಎತ್ತುತ್ತಿಲ್ಲ ಆದರೆ ಶಿವನಗೌಡ ನಾಯಕ ಅವರು ಧ್ವನಿ ಎತ್ತಿದ್ದಾರೆ ಕಂಕಣ ಕಟ್ಟಿ ನಿಂತಿದ್ದಾರೆ ಅವರಿಗೆ ಬೆನ್ನೆಲುಬಾಗಿ ನಾವೆಲ್ಲರೂ ನಿಲ್ಲಬೇಕು ಎಂದು ಕರೆ ನೀಡಿದರು.

ನಮ್ಮ ಭಾಗದಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿದರೂ ಸಮರ್ಪಕ ನೀರಾವರಿ ಸೌಲಭ್ಯ ಇಲ್ಲ. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಸೂಕ್ತ ಆಸ್ಪತ್ರೆಗಳ ಕೊರತೆಯಿಂದ ಜನರು ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕು. ಸಮಗ್ರ ನೀರಾವರಿ ಮತ್ತು ಏಮ್ಸ್ ಮಂಜೂರಾತಿಗಾಗಿ ಸಂಕಲ್ಪ ಸಮಾಗಮ ಆಯೋಜಿಸಿರುವುದು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೌರಿಗದ್ದೆಯ ಅವಧೂತ ವಿನಯ ಗುರೂಜಿ, ಮದ್ದೂರಿನ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮಾದಯ್ಯ ಗುರುವಿನ್, ಶಿವಣ್ಣ ತಾತ ಮುಂಡರಗಿ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್, ಕೆಎಸ್‌ಎನ್ ಜನಕಲ್ಯಾಣ ಸಮಿತಿ ಅಧ್ಯಕ್ಷ ಎಸ್. ತಿಮ್ಮರೆಡ್ಡಿ ಬೋಗಾವತಿ, ಶರಣಬಸವ ಜೋಳದಡಗಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku