
ಸುದ್ದಿ ಬೆಳಕು ವಾರ್ತೆ
ಹುನಗುಂದ : ಮಾನವನ ಬದುಕು ಭಗವಂತನ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಅರಿತು ಸತ್ಕಾರ್ಯಗಳ ಮೂಲಕ ಸಾರ್ಥಕಗೊಳಿಸಿದಾಗ ಬದುಕು ಬಂಗಾರವಾಗುತ್ತದೆ. ನಿರಂತರ ಪರಿಶ್ರಮ, ದೃಢ ಸಂಕಲ್ಪ ಮತ್ತು ಸಾಧನೆಯ ಛಲವೇ ಶ್ರೇಯಸ್ಸಿನ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್. ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ಮಾಜಿ ಸಚಿವ ದಿವಂಗತ ಎಸ್.ಆರ್. ಕಾಶಪ್ಪನವರ 24ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನವನ ಜೀವನ ಸುಖ-ದುಃಖ, ಜಯ-ಅಪಜಯ, ಮಾನ-ಅಪಮಾನಗಳಂತಹ ದ್ವಂದ್ವಗಳಿಂದ ಕೂಡಿದೆ. ಈ ಸತ್ಯವನ್ನು ಅರಿತವರು ಯಾವುದೇ ಸಂಕಷ್ಟ ಎದುರಾದರೂ ಎದೆಗುಂದದೆ ಮುನ್ನಡೆಯುತ್ತಾರೆ ಎಂದು ಹೇಳಿದರು.
ಜೀವನ ಶಾಶ್ವತವಲ್ಲ, ಆದರೆ ಮಾಡಿದ ಸತ್ಕಾರ್ಯಗಳು ಶಾಶ್ವತವಾಗಿರುತ್ತವೆ. ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಮಾಜಿ ಸಚಿವ ಎಸ್.ಆರ್. ಕಾಶಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಸ್ತರಣೆ, ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಶಾಲಾ ಕಟ್ಟಡಗಳ ಅಭಿವೃದ್ಧಿ ಹಾಗೂ ರೈತರ ಹಿತಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಸ್ಮರಿಸಿದರು.
ಪ್ರಸ್ತುತ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರು ತಂದೆಯವರ ಜನಪರ ಮಾರ್ಗದಲ್ಲೇ ಸಾಗುತ್ತಿದ್ದು, ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳು ದೊರೆಯಲಿ ಎಂದು ಜಗದ್ಗುರುಗಳು ಆಶೀರ್ವದಿಸಿದರು.
ಧರ್ಮ ಮತ್ತು ಅಭಿವೃದ್ಧಿಗೆ ಸಮರ್ಪಿತ ಜೀವನ
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು, ಭೌತಿಕ ಸುಖಕ್ಕಿಂತ ಆತ್ಮಜ್ಞಾನ ಮತ್ತು ಧರ್ಮದ ಬೆಳಕು ಮುಖ್ಯ. ಎಸ್.ಆರ್. ಕಾಶಪ್ಪನವರು ಧರ್ಮ, ಸಂಸ್ಕೃತಿ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಅಪರೂಪದ ಜನನಾಯಕ ಎಂದು ಹೇಳಿದರು.
ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಹುಟ್ಟು-ಸಾವು ಅನಿವಾರ್ಯವಾದರೂ ಮಧ್ಯದ ಜೀವನವನ್ನು ಸಮಾಜಮುಖಿ ಕಾರ್ಯಗಳಿಂದ ಅರ್ಥಪೂರ್ಣಗೊಳಿಸುವುದೇ ನಿಜವಾದ ಸಾಧನೆ. ಪಂಚಪೀಠಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಎಸ್.ಆರ್. ಕಾಶಪ್ಪನವರು ಜನಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಸ್ಮರಿಸಿದರು.
ಕವನ ಸಂಕಲನ ಬಿಡುಗಡೆ
ಕಾರ್ಯಕ್ರಮದಲ್ಲಿ ಪ್ರಿಯಾಂಕ ಬಿರಾದಾರ ರಚಿಸಿದ ‘ಜನಾನುರಾಗಿ ಕಾಶಪ್ಪನವರ’ ಕವನ ಸಂಕಲನವನ್ನು ರಂಭಾಪುರಿ ಹಾಗೂ ಕಾಶಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ವಿಜಯಾನಂದ ಕಾಶಪ್ಪನವರ ಮಾತು
ಶಾಸಕ ವಿಜಯಾನಂದ ಕಾಶಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿ, ವೀರಶೈವ ಧರ್ಮದ ಇತಿಹಾಸ ಮತ್ತು ಪಂಚಪೀಠಗಳ ಪರಂಪರೆ ಸಮಾಜಕ್ಕೆ ಆದರ್ಶವಾಗಿದೆ. ಪಂಚಪೀಠಗಳ ಆಶೀರ್ವಾದ ತಮ್ಮ ಕುಟುಂಬಕ್ಕೆ ದೊರೆತಿರುವುದು ಸೌಭಾಗ್ಯ ಎಂದು ಹೇಳಿದರು.
ಪ್ರತಿಭಾವಂತರಿಗೆ ಗೌರವ
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಬೆಂಗಳೂರಿನ ಚಲನಚಿತ್ರ ನಿರ್ದೇಶಕ ಎಂ.ಎ. ಕುಪ್ಪೇಲೂರು (ರಾಜಾ) ಅವರಿಗೆ ಎಸ್.ಆರ್.ಕೆ. ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಲ್ವಕೆರೂರು ಸಿದ್ಧಲಿಂಗ ಶಿವಾಚಾರ್ಯರು, ಗಿರಿಸಾಗರ ರುದ್ರಮುನಿ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಬಾಗಲಕೋಟೆ ಶಾಸಕ ಉಮೇಶ ಮೇಟಿ, ಇಳಕಲ್ಲ ನಗರಸಭೆಯ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಮತ್ತು ಭಕ್ತರು ಭಾಗವಹಿಸಿದ್ದರು.
ಮಾಜಿ ಶಾಸಕಿ ಗೌರಮ್ಮ ಎಸ್. ಕಾಶಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರು ಸ್ವಾಗತಿಸಿದರು. ಬಸವರಾಜ ಶಿರೂರು ಕಾರ್ಯಕ್ರಮ ನಿರೂಪಿಸಿದರು, ಗಂಗಾಧರ ಹಿರೇಮಠ ಪ್ರಾರ್ಥನೆ ನೆರವೇರಿಸಿದರು. ಸಮಾರಂಭದ ಬಳಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.












Leave a Reply