ಮಹಿಳೆಯರು ನಾರಿ-ಕಿಲ್ಪ್ ಯೋಜನೆ ಸೌಲಭ್ಯ ಪಡೆದುಕೊಳ್ಳಿ: ಪಿಡಿಓ ನಾಗರತ್ನ

Posted by

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್ :  ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದ ಅತ್ಯಂತ ನಿರ್ಗತಿಕ ಕುಟುಂಬಗಳು, ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಮಹತ್ವಕಾಂಕ್ಷೆಯ ನಾರಿ-ಕಿಲ್ಪ್ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಬ್ಬ ನಾಗರೀಕರು ಪಡೆದುಕೊಳ್ಳಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರತ್ನ ತಿಳಿಸಿದರು.

ತಾಲೂಕ ಪಂಚಾಯತಿ ಗುರುಮಠಕಲ್‌, ಗ್ರಾಮ ಪಂಚಾಯತಿ ಯಲ್ಹೇರಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯಾದಗಿರಿ ಸಹಯೋಗದಲ್ಲಿ “ಪ್ರತಿ ನಾಗರಿಕರಿಗೆ ದಾಖಲೆ, ಪ್ರತಿ ಹಕ್ಕಿಗೆ ಭದ್ರತೆ” ಎಂಬ ಘೋಷ ವಾಕ್ಯದಡಿಯಲ್ಲಿಆಯೋಜಿಸಲಾದ ದಾಖಲಾತಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಗೆ ಸರಕಾರದಿಂದ ಅನುಷ್ಟಾನಗೊಳ್ಳುತ್ತಿರುವ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಉಚಿತವಾಗಿ ಆಯುಷ್ಮಾನ್‌, ಇ-ಶ್ರಮ, ಆಧಾರ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ಪ್ರಧಾನ ಮಂತ್ರಿ ರೈತ ಸಮ್ಮಾನ್‌ ಪಿಂಚಣಿ ಯೋಜನೆಯಂತಹ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾರಿ ಕಿಲ್ಪ್ ತಾಲ್ಲೂಕು ಸಂಯೋಜಕರಾದ ಶ್ರೀ. ಬಂದೇನವಾಜ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸರಕಾರದಿಂದ ಉಚಿತವಾಗಿ ದೊರೆಯುವ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಲು ಸಾಕಷ್ಟ ಅವಕಾಶಗಳಿವೆ. ಅವುಗಳನ್ನು ಸುಲಭವಾಗಿ ಸಾರ್ವಜನಿಕರು ಪಡೆದುಕೊಳ್ಳಬಹುದು. ಶಿಬಿರದಲ್ಲಿ ಆಯುಷ್ಮಾನ್‌ ಕಾರ್ಡ್-45‌, ಇ-ಶ್ರಮ ಕಾರ್ಡ್-15‌, ಪ್ಯಾನ್‌ ಕಾರ್ಡ್-3‌ ಹಾಗೂ ಪ್ರಧಾನ ಮಂತ್ರಿ ರೈತ ಸಮ್ಮಾನ್‌ ಪಿಂಚಣಿ ಯೋಜನೆಯಡಿ 5 ಅರ್ಜಿಗಳನ್ನು ಸಲ್ಲಿಸಿ ಉಚಿತವಾಗಿ ದಾಖಲೆಗಳನ್ನು ವಿತರಿಸಲಾಯಿತು ಎಂದು ಅಭಿಯಾದಲ್ಲಿ ತಿಳಿಸಿದರು.

ಅಭಿಯಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ. ಸಿ. ಟ್ರಸ್ಟ್ (ರಿ) ಯಾದಗಿರಿ ತಾಲೂಕ ನೋಡಲ್‌ ಅಧಿಕಾರಿ ಸುನೀಲ್‌, ಯಲ್ಹೇರಿ ಗ್ರಾಮ ಪಂಚಾಯತ ನಾರಿ-ಕಿಲ್ಪ್ ಸಂಪನ್ಮೂಲ ವ್ಯಕ್ತಿ ಶಾರದಮ್ಮ‌, ಪಂಚಾಯತ ಸಿಬ್ಬಂದಿಗಳು, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಅಭಿಯಾನದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku