
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 18 : ಬೆಂಗಳೂರು–ಮುಂಬೈ ವಂದೇ ಭಾರತ್ ಶಯನಯಾತ್ರೆ (ಸ್ಲೀಪರ್) ರೈಲು ಆರಂಭದಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಸೇವೆ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮನಾಯಕ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸುವುದಾಗಿ ಹೇಳಲಾಗಿದ್ದು, ಯಾದಗಿರಿ–ಬೆಂಗಳೂರು ನಡುವೆ ಸುಮಾರು ಐದು ಅರ್ಧ ಗಂಟೆ ಹಾಗೂ ಯಾದಗಿರಿ–ಮುಂಬೈ ನಡುವೆ ಸುಮಾರು ಏಳು ಗಂಟೆಗಳಲ್ಲಿ ಪ್ರಯಾಣ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ರೈಲು ಆರಂಭವಾದರೆ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಗೆ ವೇಗ ಸಿಗಲಿದೆ. ವೇಗದ ಸಾರಿಗೆ ವ್ಯವಸ್ಥೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು. ಆದರೆ ಇನ್ನೂ ರೈಲು ಆರಂಭವಾಗದೇ ಇರುವುದರಿಂದ ಜನರಲ್ಲಿ ಅನುಮಾನ ಮೂಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿ–ಬೆಳಗಾವಿ ಮಾರ್ಗದಲ್ಲಿ ರೈಲು ಓಡಿಸುವ ಬದಲು ನಮ್ಮ ಭಾಗಕ್ಕೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ ಹೇಳಿಕೆಗೆ ವಾರವಾದರೂ ರೈಲಿನ ವೇಳಾಪಟ್ಟಿ ಪ್ರಕಟವಾಗಿಲ್ಲ ಎಂದು ಅವರು ಹೇಳಿದರು. ಈ ಹಿಂದೆ ನಮ್ಮ ಭಾಗಕ್ಕೆ ಸಿಗಬೇಕಿದ್ದ ಐಐಐಟಿ ಯೋಜನೆಯನ್ನು ಧಾರವಾಡಕ್ಕೆ ವರ್ಗಾಯಿಸಿದಂತೆ ಈ ಯೋಜನೆಯಲ್ಲೂ ಅನ್ಯಾಯವಾಗಬಾರದು ಎಂದು ಎಚ್ಚರಿಸಿದರು.
ರಾಯಚೂರು ಹಾಗೂ ಕಲಬುರಗಿ ಸಂಸದರು ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ರೈಲು ಸೇವೆ ಆರಂಭಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಭೀಮನಾಯಕ್ ತಿಳಿಸಿದ್ದಾರೆ.
ಒಟ್ಟಾರೆ, ವಂದೇ ಭಾರತ್ ಸ್ಲೀಪರ್ ರೈಲು ಆರಂಭದ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದ್ದು, ವಿಳಂಬದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.










Leave a Reply