ಸಿದ್ದರಾಮಯ್ಯರಿಂದ ನರೇಂದ್ರ ಮೋದಿ ಅವರಿಗೆ ಮನವಿ: ಕರ್ನಾಟಕದ ಬಾಕಿ ಯೋಜನೆಗಳಿಗೆ ತ್ವರಿತ ಕ್ರಮಕ್ಕೆ ಒತ್ತಾಯ

Posted by

ಬೆಂಗಳೂರು : ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಬಾಕಿ ಅನುದಾನಗಳಿಗೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಿದರು.

ಈ ವೇಳೆ ಕರ್ನಾಟಕದ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು. ರಾಜ್ಯವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರೂ, ಕೆಲವು ಯೋಜನೆಗಳು ಇನ್ನೂ ಅನುಮೋದನೆ ಅಥವಾ ಜಾರಿಗೆ ಬಾರದಿರುವುದನ್ನು ಅವರು ಗಮನಕ್ಕೆ ತಂದರು.

ಮನವಿಪತ್ರದಲ್ಲಿ ಕೋಲಾರ ರೈಲು ಕೋಚ್ ಫ್ಯಾಕ್ಟರಿ ಸ್ಥಾಪನೆ, ಬೆಂಗಳೂರು–ಮೈಸೂರು ಹೈ ಸ್ಪೀಡ್ ರೈಲು ಯೋಜನೆ ವಿಸ್ತರಣೆ, ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಅನುದಾನ ಬಿಡುಗಡೆ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಇದಲ್ಲದೆ, ಜಲ ಜೀವನ ಮಿಷನ್ ಅಡಿಯಲ್ಲಿ ಬಾಕಿ ಇರುವ ₹17,554 ಕೋಟಿ ಅನುದಾನ ಬಿಡುಗಡೆ, ಗ್ರಾಮ ಪಂಚಾಯತ್‌ಗಳಿಗೆ 15ನೇ ಹಣಕಾಸು ಆಯೋಗದ ಅನುದಾನ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ, ಹಾಗೂ ರಾಜ್ಯಕ್ಕೆ ಬಾಕಿ ಇರುವ ರಾಜಸ್ವ ಕೊರತೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.

ಬೆಂಗಳೂರು ನಗರದ ಅಭಿವೃದ್ಧಿಗೆ ₹6,000 ಕೋಟಿ ವಿಶೇಷ ಅನುದಾನ ನೀಡುವುದು, ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡುವುದು, ಅಪ್ಪರ್ ಭದ್ರಾ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡುವುದು ಸೇರಿದಂತೆ ಹಲವು ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೂ ಆದ್ಯತೆ ನೀಡುವಂತೆ ಕೇಳಿಕೊಳ್ಳಲಾಗಿದೆ.

ಅದೇ ರೀತಿ ಮಹಾದಾಯಿ ಕಳಸಾ ನಾಲಾ ಯೋಜನೆಗೆ ವನ್ಯಜೀವಿ ಅನುಮತಿ, ನದಿ ಜೋಡಣೆ ಯೋಜನೆಗಳಲ್ಲಿ ರಾಜ್ಯಕ್ಕೆ ನ್ಯಾಯಯುತ ನೀರಿನ ಹಂಚಿಕೆ, 56% ಮೀಸಲಾತಿಯನ್ನು ಸಂವಿಧಾನದ 9ನೇ ಅನುಬಂಧದಲ್ಲಿ ಸೇರಿಸುವುದು, ಕಲ್ಯಾಣ ಕರ್ನಾಟಕಕ್ಕೆ ವಾರ್ಷಿಕ ಅನುದಾನ ಒದಗಿಸುವುದು ಮತ್ತು ರಾಯಚೂರಿನಲ್ಲಿ AIIMS ಸ್ಥಾಪನೆಗೆ ಅನುಮೋದನೆ ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಾಗಿದ್ದು, ಈ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Suddi Belaku