ಸೈದಾಪುರದಲ್ಲಿ ಖ್ವಾಜಾ ಬಂದೇನವಾಜ್ ಉರುಸ್ – ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತ

Posted by

ಸೈದಾಪುರದಲ್ಲಿ ಖ್ವಾಜಾ ಬಂದೇನವಾಜ್ ಉರುಸ್ ವೇಳೆ  ಭಕ್ತರು ಜ್ಯೋತಿ ಸಮರ್ಪಣೆ

ಸೈದಾಪುರ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಖ್ವಾಜಾ ಬಂದೇನವಾಜ್ ಉರುಸ್ ಬುಧವಾರದಿಂದ ಆರಂಭವಾಗಿ ಭಕ್ತಿಭಾವದಿಂದ ಜರುಗುತ್ತಿದೆ. ಸಾವಿರಾರು ಭಕ್ತರು ಜಾತಿ-ಮತ ಭೇದವಿಲ್ಲದೆ ಉರುಸ್‌ನಲ್ಲಿ ಭಾಗವಹಿಸಿ ಧಾರ್ಮಿಕ ಏಕತೆಯ ಸಂದೇಶವನ್ನು ಸಾರುತ್ತಿದ್ದಾರೆ.
ಗುರುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಉರುಸ್ ಅದ್ಧೂರಿಯಾಗಿ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಜ್ಯೋತಿಯನ್ನು ಹೊತ್ತು ದರ್ಗಾಕ್ಕೆ ತೆರಳಿ ಹೂಮಾಲೆ, ಗಲೀಫ್ ಹಾಗೂ ಜ್ಯೋತಿಯನ್ನು ಸಮರ್ಪಿಸಿ ದರ್ಶನ ಪಡೆದರು.
ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಆಚರಣೆಗಳು ವಿಭಿನ್ನವಾಗಿದ್ದರೂ, ಈ ಉರುಸ್‌ನಲ್ಲಿ ಇಬ್ಬರ ಭಾವೈಕ್ಯತೆ ಸ್ಪಷ್ಟವಾಗಿ ಕಾಣಿಸಿತು. ಸಹೋದರತ್ವದ ಭಾವದಿಂದ ಎಲ್ಲ ವರ್ಗದ ಜನರು ಉರುಸ್ ಆಚರಣೆಯಲ್ಲಿ ಪಾಲ್ಗೊಂಡರು.

ಉರುಸ್ ನಿಮಿತ್ತ ದರ್ಗಾ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಆರು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಸೈದಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳು, ನೆರೆ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

ಅದ್ಧೂರ ಗಂಧ ಮೆರವಣಿಗೆ
ಬುಧವಾರ ಸಂಜೆ ಸೈದಾಪುರ ಪಟ್ಟಣದಿಂದ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ಗಂಧದ ಅದ್ಧೂರಿ ಮೆರವಣಿಗೆ ನಡೆಯಿತು. ಜಾಮೀಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಬಸವೇಶ್ವರ, ಕನಕ ಹಾಗೂ ಬಾಬು ಜಗಜೀವನ್ ರಾಮ್ ವೃತ್ತಗಳ ಮೂಲಕ ಸಾಗಿತು.
ಹಿಂದೂ-ಮುಸ್ಲಿಂ ಸಮುದಾಯದ ಜನರು ಮಕ್ಕಳಿಂದ ದೊಡ್ಡವರವರೆಗೆ ಸಮಾನ ಭಕ್ತಿಯಿಂದ ಭಾಗವಹಿಸಿ ದರ್ಗಾಕ್ಕೆ ತೆರಳಿ ನಮನ ಸಲ್ಲಿಸಿದರು. ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆಗಳು ಮತ್ತು ವಾದ್ಯಗಳ ಮೂಲಕ ಗಂಧವನ್ನು ಸಾಗಿಸಲಾಯಿತು.

“ಸೈದಾಪುರದಲ್ಲಿ ನಡೆಯುವ ಖ್ವಾಜಾ ಬಂದೇನವಾಜ್ ಉರುಸ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ. ಸೂಫಿ ಸಂತರು ಮನುಕುಲಕ್ಕೆ ಮಹತ್ವದ ಸಂದೇಶಗಳನ್ನು ನೀಡಿದ್ದಾರೆ. ಅವರ ಮಾರ್ಗದಲ್ಲಿ ಬದುಕಬೇಕು ಎಂದು ನಾನು ನಂಬಿದ್ದೇನೆ,” ಎಂದು ಭಕ್ತರಾದ ಡಾ. ಸುಷ್ಮಾ ಎ. ಕಾವಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku