ಭಾರತ್ ಜೋಡೋ ಯುವ ಸಂಘ: ಪ್ರತಿ ಸಂಘಕ್ಕೆ ₹10 ಲಕ್ಷ ಅನುದಾನ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ರಾಜ್ಯದಲ್ಲಿ ಯುವ ಶಕ್ತಿಯ ಸಬಲೀಕರಣ ಮತ್ತು ಅವರಲ್ಲಿ ಯುವ ನಾಯಕತ್ವ ಬೆಳೆಸುವ ಉದ್ದೇಶದಿಂದಾಗಿ ರಾಜ್ಯ ಸರಕಾರ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿ ಸಂಘಕ್ಕೆ ತಲಾ 10 ಲಕ್ಷ ರೂಪಾಯಿ ವಾರ್ಷಿಕ ಅನುದಾನವನ್ನು ರಾಜ್ಯ ಸರಕಾರ ನೀಡುತ್ತದೆ. ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ಗಳ ವ್ಯಾಪ್ತಿ ಸೇರಿ ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸರಕಾರ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ಮತ್ತು ಬೆಂಗಳೂರಿನ ಜಿಬಿಎ ವ್ಯಾಪ್ತಿಯಲ್ಲಿ ಸರಾಸರಿ 10 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಸAಘ ಸದಸ್ಯರಾಗಲು ಕನಿಷ್ಠ 16 ವರ್ಷದಿಂದ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಸಂಘದಲ್ಲಿ ಕನಿಷ್ಠ 100 ಜನ ಯುವ ಸದಸ್ಯರು ಇರಬೇಕು. ನೋಂದಣಿ ಮಾಡಿಸಲು ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಿ ಸದಸ್ಯರಾಗಬೇಕು ಎಂದು ತಿಳಿಸಿದರು.

ಯುವ ಜನತೆ ಈ ದೇಶದ ಆಸ್ತಿಯಾಗಿದ್ದಾರೆ. ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವುದೇ ಪ್ರಮುಖವಾದ ಉದ್ದೇಶವಾಗಿದೆ. ಇದನ್ನು ಪ್ರತಿಯೊಬ್ಬ ಯುವ ಜನತೆ ಅರಿತುಕೊಳ್ಳುವುದು ತುಂಬ ಅಗತ್ಯವಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

Suddi Belaku