
ಯುವ ಸಮುದಾಯಕ್ಕೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಹಾಗೂ ಪ್ರತಿಪಾದನೆಗಳ ಪ್ರಸ್ತುತತೆಯನ್ನು ನಮಗಾಣಿಸಲು ಮಾರ್ಚ್ 26 ರಂದು ವಿಶೇಷ ಕಾರ್ಯಾಗಾರ: ಡಾ. ಸುಗುಣಾ ಬಸವರಾಜ
ಮಹಾತ್ಮ ಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ ಕುರಿತಾಗಿ ಮಾರ್ಚ್ 26 ರಂದು ಹಮ್ಮಿಕೊಳ್ಳಲಾಗಿರುವ ಅಂತರ ವಿಶ್ವವಿದ್ಯಾಲಯ ಮಟ್ಟದ ಕಾರ್ಯಾಗಾರದಲ್ಲಿ ವಿದ್ಯಾರ್ಥಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ: ಡಾ. ಸಂತೋಷಕುಮಾರ ರೇವೂರ
ರಾಯಚೂರು: ದೇಶದ ಭದ್ರ ಭವಿಷ್ಯದ ಹೊಣೆ ಹೊತ್ತಿರುವ ಇಂದಿನ ಯುವಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವ್ಯಕ್ತಿತ್ವ ಮತ್ತು ಚಿಂತನೆಗಳ ಸಮಕಾಲೀನ ಪ್ರಸ್ತುತತೆಯನ್ನು ಮನಗಾಣಿಸುವ ಉದ್ದೇಶದಿಂದ ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಾರ್ಚ್ 26 ರಂದು ಅಂತರ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣಾ ಬಸವರಾಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಜಂಟಿಯಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ರಾಜ್ಯ ಎನ್ಎಸ್ಎಸ್ ಕೋಶ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರಕಾರ ಇವರುಗಳ ಸಹಭಾಗಿತ್ವದಲ್ಲಿ “ಮಹಾತ್ಮ ಗಾಂಧಿ: ವ್ಯಕ್ತಿತ್ವ ಮತ್ತು ವಿಚಾರಧಾರೆಗಳ ಪ್ರಸ್ತುತತೆ” ಎಂಬ ಶೀರ್ಷಿಕೆಯಡಿ ಸದರಿ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳುತ್ತಿವೆ. ಇಂದಿನ ಯುವ ಸಮುದಾಯಕ್ಕೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಹಾಗೂ ಪ್ರತಿಪಾದನೆಗಳ ಪ್ರಸ್ತುತತೆಯನ್ನು ಮನಗಾಣಿಸಲು ಮಾರ್ಚ್ 26 ರಂದು ಆಯೋಜನೆಗೊಳ್ಳಲಿರುವ ಸದರಿ ವಿಶೇಷ ಕಾರ್ಯಾಗಾರದಲ್ಲಿ ಯುವ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಮತ್ತು ಆದರ್ಶಗಳ ಅಡಿಪಾಯದಡಿಯಲ್ಲಿಯೇ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಸಂಪಾದಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹೇಳಿದರು.
ಮಹಾತ್ಮ ಗಾಂಧೀಜಿಯವರ “ಆತ್ಮಕಥೆ” ಕೃತಿಯ ಶತಮಾನೋತ್ಸವ, ಗಾಂಧಿ ಸ್ಮಾರಕ ನಿಧಿಯ ಮತ್ತು ಭೂದಾನ ಚಳವಳಿಯ ವಜ್ರ ಮಹೋತ್ಸವದ ಅಂಗವಾಗಿ ಗಾಂಧೀಜಿಯವರ ಚಿಂತನೆಗಳ ಕುರಿತಾಗಿ ಈ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದು ಕಾಣಲಾಗುತ್ತಿರುವ ಅಮಾನವೀಯ ಹಾಗೂ ಮನುಕುಲ ವಿನಾಶಕಾರಿ ಸನ್ನಿವೇಶದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ, ಸಹಿಷ್ಣುತೆ, ಸಹಬಾಳ್ವೆ, ಸೌಹಾರ್ದತೆ ಮುಂತಾದ ಮಾನವೀಯ ಮೌಲ್ಯಗಳ ಪ್ರತಿಪಾದನೆ ಮತ್ತು ಆಚರಣೆಗಳ ಸಮಕಾಲೀನ ಪ್ರಸ್ತುತತೆ ಮತ್ತು ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ವಿಶೇಷವಾಗಿ ಏರ್ಪಡಿಸಲಾಗುತ್ತಿದೆ. “ಮಹಾತ್ಮ ಗಾಂಧಿ, ಆಚಾರ್ಯ ವಿನೋಭಾ ಭಾವೆ ಮತ್ತು ಭೂದಾನ ಚಳುವಳಿ”, “ಮಹಾತ್ಮ ಗಾಂಧೀಜಿಯವರ ಆರ್ಥಿಕ ಚಿಂತನೆಗಳು ಹಾಗೂ ಆತ್ಮ ನಿರ್ಭರ ಭಾರತ” ಮತ್ತು “ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ತತ್ವಗಳ ಸಮಕಾಲೀನ ಪ್ರಸ್ತುತತೆ” ಎಂಬ ಪ್ರಮುಖ ವಿಷಯಗಳ ಮೇಲೆ ವಿಷಯತಜ್ಞರು ವಿಶೇಷ ಉಪನ್ಯಾಸ ನೀಡಲಿರುವರು. ನಗರದ ವಿವಿಧ ಕಾಲೇಜುಗಳ ಯುವ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದ್ದು ಸದರಿ ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆಯಲಿ ಎಂದು ಕಾರ್ಯಾಗಾರದ ಸಂಯೋಜಕ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಕರೆ ನೀಡಿರುವರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಗ್ರಂಥಪಾಲಕ ಡಾ. ಸುರೇಶ್ ಶರಣಪ್ಪ, ಸಾಂಸ್ಕೃತಿಕ ಘಟಕದ ಸಂಯೋಜಕ ಡಾ. ಪ್ರಸನ್ನಕುಮಾರ್, ಐಕ್ಯೂಎಸಿ ಸಂಯೋಜಕಿ ಡಾ . ಜ್ಯೋತಿ ಸಿ ಕೆ, ಐಕ್ಯೂಎಸಿ ಸಹ ಸಂಯೋಜಕ ಶ್ರೀ. ಶರಣಗೌಡ ಉಪಸ್ಥಿತರಿದ್ದರು.










Leave a Reply