
ಜಗಳೂರು : ಮನುಷ್ಯ ಬಾಳಿ ಬದುಕಲು ನೀರು ಅನ್ನ ಗಾಳಿ ಬೇಕು. ಆದರ್ಶ ವ್ಯಕ್ತಿಯಾಗಿ ಬಾಳಲು ಧರ್ಮ ಜ್ಞಾನ ಅವಶ್ಯಕ. ಬದುಕು ಶಾಶ್ವತವಲ್ಲ. ಆದರೆ ಬದುಕಿನಲ್ಲಿ ಆಧ್ಯಾತ್ಮದ ಅರಿವು ಮತ್ತು ಆಚರಣೆ ಜೀವನದ ಶ್ರೇಯಸ್ಸಿಗೆ ಕಾರಣವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಮತ್ತು ಧನ ಇವೆರಡೂ ಮಾನವ ಜೀವನಕ್ಕೆ ಅಗತ್ಯ. ಜಿಡ್ಡುಗಟ್ಟಿದ ಭಾವನೆಗಳನ್ನು ಕಳೆದು ಸಾತ್ವಿಕ ನೆಲೆಗಟ್ಟಿನ ಮೇಲೆ ಆಧ್ಯಾತ್ಮ ತತ್ವಗಳನ್ನು ಬೋಧಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಬೆಳೆದು ನಿಂತ ಮರ ತಾನು ಬಿಸಿಲುಂಡು ದಾರಿಕಾರರಿಗೆ ನೆರಳು ನೀಡುತ್ತದೆ. ಅದರಂತೆ ಮಹಾತ್ಮರು ತಾವು ನೋವು ನುಂಗಿ ಸಮಾಜಕ್ಕೆ ಒಳಿತನ್ನು ಬಯಸುತ್ತಾ ಬಂದಿದ್ದಾರೆ. ವೀರಶೈವ ಧರ್ಮ ಉಗಮ ಉತ್ಥಾನ ಪುನರುತ್ಥಾನ ಮತ್ತು ಜಾಗೃತಿ ಎಂಬ ನಾಲ್ಕು ಘಟ್ಟಗಳನ್ನು ಹೊಂದಿದೆ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ ಧರ್ಮಾಚರಣೆಯಿಂದ ಭಾವನೆಗಳು ಬೆಳೆಯಲು ಸಾಧ್ಯ. ಬೆಳೆಯುವ ವ್ಯಕ್ತಿಗೆ ಬುದ್ಧಿಶಕ್ತಿ ಮತ್ತು ಭಾವನೆಗಳು ಎರಡೂ ಅವಶ್ಯಕ. ಜ್ಞಾನ ಕ್ರಿಯಾತ್ಮಕವಾದ ಬೋಧನೆಯಿಂದ ಮಾನವನ ಬದುಕನ್ನು ಬೆಳೆಸಿದ ಯಶಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಅವರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಜೀವಾತ್ಮನಿಗೆ ಬೆಳಕಿನ ದಾರಿ ತೋರಿವೆ. ಜಗಳೂರು ಪಟ್ಟಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ಹಮ್ಮಿಕೊಂಡಿರುವುದು ತಮ್ಮೆಲ್ಲರ ಧರ್ಮ ನಿಷ್ಠೆ ಮತ್ತು ಪೀಠಾಭಿಮಾನಕ್ಕೆ ಕಾರಣವಾಗಿವೆ ಎಂದು ಹರುಷ ವ್ಯಕ್ತಪಡಿಸಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಭೌತಿಕ ಜೀವನ ಸಮೃದ್ಧಿಗೊಂಡರೆ ಸಾಲದು. ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು. ಸತ್ಯ ಸುಂದರ ಸಂಸ್ಕೃತಿಯ ಪರಿಪಾಲನೆಯಿಂದ ಮನುಷ್ಯನ ಬದುಕು ಬಲಗೊಳ್ಳುತ್ತದೆ. ಆತ್ಮ ವಿಶ್ವಾಸ ನಿಶ್ಚಿತ ಗುರಿ ಮತ್ತು ಸಂಯಮ ಇವು ಮೂರು ಯಶದ ಹಾದಿಗೆ ಕರೆದೊಯ್ಯುವ ಅಂಶಗಳಾಗಿವೆ. ಜಗ ಬೆಳಗಲು ಸೂರ್ಯ ಬೇಕು. ಬದುಕು ಬೆಳಗಲು ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಚಿಂತನೆಗಳ ಅವಶ್ಯಕತೆ ಬಹಳಷ್ಟಿದೆ ಎಂದರು.
ನೇತೃತ್ವ ವಹಿಸಿದ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿAಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕೃತಕ ಹೂವು ನೈಜ ಹೂವಿಗಿಂತ ಆಕರ್ಷಕವಾಗಿ ಕಂಡರೂ ದುಂಬಿ ನೈಜ ಹೂವಿನಿಂದ ಮಕರಂದ ಪಡೆಯಲು ಸಾಧ್ಯ. ಧರ್ಮದಿಂದ ಮಾನವೀಯ ಸಂಬAಧಗಳು ಬೆಳೆಯಲು ಸಾಧ್ಯವಿದೆ. ನ್ಯಾಯ ನೀತಿ ಧರ್ಮ ಬದುಕಿನ ಪ್ರತಿಪಾದನೆಯಾಗಬೇಕು. ಮಾತು ಕೃತಿ ಒಂದೇ ಆಗಿದ್ದಲ್ಲಿ ಬದುಕಿಗೆ ನಿಜವಾದ ಅರ್ಥ ಬರುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಜೀವಾತ್ಮ ಪರಮಾತ್ಮನಾಗಲು ಬೋಧಿಸಿದ ಶಿವಾದ್ವೆöÊತ ಸಿದ್ಧಾಂತ ನಮ್ಮೆಲ್ಲರ ಬಾಳಿನ ಉಸಿರಾಗಲೆಂದರು. ಉಪದೇಶಾಮೃತ ನೀಡಿದ ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸತ್ಯಾನ್ವೇಷಣೆಯ ದಾರಿಯಲ್ಲಿ ನಡೆದಾಗ ಜೀವನ ಮೌಲ್ಯ ಸಮೃದ್ಧಿಯಾಗುತ್ತದೆ. ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆಯುವ ಗುರಿ ಮನುಷ್ಯನದಾಗಬೇಕು. ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವದ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ್ದನ್ನು ಎಲ್ಲರೂ ಪರಿಪಾಲಿಸಿ ಪಾವನರಾಗಬೇಕೆಂದರು. ನಿವೃತ್ತ ಉಪನ್ಯಾಸಕ ಜೆ.ಎಂ.ಮಲ್ಲಿಕಾರ್ಜುನಯ್ಯ ಉಪನ್ಯಾಸ ನೀಡಿ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸಿದೆ. ಗಂಡು ಹೆಣ್ಣು ಉಚ್ಛ ನೀಚ ಬಡವ ಬಲ್ಲಿದ ಎನ್ನದೇ ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಸಿದ್ಧಿ ಸಾಧನೆ ಮತ್ತು ಬೋಧನೆಗಳು ಸಾಧಕರ ಬಳಗಕ್ಕೆ ಸಂಜೀವಿನಿಯಾಗಿವೆ ಎಂದರು. ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಕೆ.ಪಿ.ಪಾಲಯ್ಯ, ಪ್ರವೀಣಕುಮಾರ್ ಸಾಲಿಮಠ, ಸಿದ್ಧರಾಮಯ್ಯ ಬಿ. ಭಾಗವಹಿಸಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಎಂ.ರುದ್ರಯ್ಯ, ಅಧ್ಯಕ್ಷ ಎನ್.ಎಂ.ಲೋಕೇಶ್, ಉಪಾಧ್ಯಕ್ಷರಾದ ಸುರೇಶ್ ಎ.ಎಂ.ಕೆ. ಡಾ.ಹಾಲಸ್ವಾಮಿ ವಿ.ಕಂಬಾಳಿಮಠ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಯ್ಯ, ಸಂಘಟನಾ ಕಾರ್ಯದರ್ಶಿ ನಂಜುAಡಸ್ವಾಮಿ ಎಂ., ಖಜಾಂಚಿ ಕೆ.ಎಂ.ಜಗದೀಶ್, ಸಂಚಾಲಕರಾದ ಬಿ.ಎಂ.ಜಿ.ಬಸವರಾಜಯ್ಯ, ಹೆಚ್.ಎಂ.ವೀರೇಶ್ ಗಡಿಮಾಕುಂಟೆ, ಎಂ.ಎನ್.ಬಸವರಾಜ್, ಸುರೇಶ ಪಿ.ಎಂ.ಪಲ್ಲಾಗಟ್ಟೆ, ರವಿ ಕೆ.ಎಂ.ಕಲ್ಲೇದೇವಪುರ, ಜಿ.ಎಂ.ಕರಿಬಸವಸ್ವಾಮಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ನಂಜುAಡಸ್ವಾಮಿ ಸ್ವಾಗತಿಸಿದರು. ಪತ್ರಕರ್ತ ಜಗದೀಶ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾರೋಟ ಉತ್ಸವ ತಾಲ್ಲೂಕು ಕಛೇರಿಯಿಂದ ವೀರಶೈವ ಕಲ್ಯಾಣ ಮಂಟಪದ ವರೆಗೆ ಸಕಲ ವಾದ್ಯ ವೈಭವದೊಂದಿಗೆ ಪೂರ್ಣ ಕುಂಭದೊAದಿಗೆ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.










Leave a Reply