100 ದಿನಗಳ ಬಳಿಕ ಯಾದಗಿರಿಯಲ್ಲಿ ಗುಡುಗು-ಸಿಡಿಲಿನ ಮಳೆ – ಜನರಿಗೆ ತಂಪಿನ ನೆಮ್ಮದಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ :  ಬರೋಬ್ಬರಿ 100 ದಿನಗಳ ನಂತರ ಗಿರಿಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು, ಸಂಜೆಯಾಗುತ್ತಿದ್ದಂತೆ ಗಾಳಿ, ಗುಡುಗು ಮತ್ತು ಸಿಡಿಲಿನ ಅರ್ಭಟದ ನಡುವೆ ಧಾರಾಕಾರ ಮಳೆ ಸುರಿಯಿತು. ಮೂರು ತಿಂಗಳುಗಳಿಂದ ಕೆಂಡದಂತಿದ್ದ ಜಿಲ್ಲೆಯ ನೆಲ ಕೆಲಹೊತ್ತು ತಂಪು ಕಂಡು ಜನರು ನಿಟ್ಟುಸಿರು ಬಿಟ್ಟರು.
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ಸಂಜೆ 4.30ರ ವೇಳೆಗೆ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯಿತು. ಶಹಾಪುರದಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದರೆ, ಸುರಪುರ, ನಾರಾಯಣಪುರ, ವಡಗೇರಾ, ಸೈದಾಪುರ ಹಾಗೂ ಗುರುಮಠಕಲ್ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಮಧ್ಯಾಹ್ನದಿಂದಲೇ ಗುಡುಗು ಮಿಶ್ರಿತ ಮಳೆ ಆರಂಭಗೊಂಡಿತ್ತು. ಕೆಲವು ಕಡೆ ತಾಸುಗಟ್ಟಲೆ ಮಳೆಯಾದ ವರದಿಯಾಗಿದೆ.
ಮೂರು ತಿಂಗಳುಗಳಿಂದ ಬಿಸಿಗಾಳಿಗೆ ಹೈರಾಣಗೊಂಡಿದ್ದ ಜನಜೀವನಕ್ಕೆ ಈ ಅಕಾಲಿಕ ಮಳೆ ತಾತ್ಕಾಲಿಕ ತಂಪು ತಂದಿದೆ. ಸಂಜೆ ವೇಳೆಗೆ ತಣ್ಣನೆಯ ವಾತಾವರಣ ನಿರ್ಮಾಣವಾಗಿ ಜಿಲ್ಲೆಯಾದ್ಯಂತ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿತು.
ಇನ್ನೂ ಬೇಸಿಗೆ ಮುಗಿಯಲು ಸುಮಾರು 15 ದಿನಗಳ ಅವಧಿ ಬಾಕಿ ಇರುವ ಹಿನ್ನೆಲೆ, ಈ ಬಾರಿ ಮಾನ್ಸೂನ್ ಸಾಮಾನ್ಯಕ್ಕಿಂತ ಒಂದು ವಾರ ಮುಂಚೆಯೇ ಜಿಲ್ಲೆಗೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕಳೆದ ಬುಧವಾರದಿಂದ ಮುಂದಿನ ಮೂರು ದಿನಗಳವರೆಗೆ ಬೆಳಗ್ಗೆ ತೀವ್ರ ಬಿಸಿಲು ಮತ್ತು ಇಳಿಹೊತ್ತಿನಲ್ಲಿ ಗುಡುಗು-ಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯನ್ನು ಇಲಾಖೆ ವ್ಯಕ್ತಪಡಿಸಿದ್ದು, ಅದೇ ರೀತಿಯ ವಾತಾವರಣ ಈಗ ಕಾಣಿಸುತ್ತಿದೆ.
ಶುಕ್ರವಾರವೂ ಇದೇ ರೀತಿಯ ಹವಾಮಾನ ಮುಂದುವರಿಯಲಿದ್ದು, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಉರಿಯುವ ಬಿಸಿಲು ಕಂಡುಬರುವ ಸಾಧ್ಯತೆ ಇದೆ. ನಂತರ ಸಂಜೆ ವೇಳೆಗೆ ಮೋಡ ಕವಿದು, ಗುಡುಗು, ಗಾಳಿ ಹಾಗೂ ಸಿಡಿಲಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದುವರೆಗೆ ಮಳೆಯಿಂದ ಯಾವುದೇ ಹಾನಿ ಸಂಭವಿಸಿದ ವರದಿ ಇಲ್ಲ. ಆದರೆ ಹಳ್ಳಿಗಳಲ್ಲಿ ವ್ಯಾಪಕವಾಗಿ ಮಳೆಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.

You Might Also Like

Leave a Reply

Your email address will not be published. Required fields are marked *

Suddi Belaku