
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ರಸಗೊಬ್ಬರ ಕೊರತೆಯನ್ನು ತಕ್ಷಣ ನಿವಾರಿಸಿ, ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ಪೂರೈಕೆ ಮಾಡುವಂತೆ ಯಾದಗಿರಿ ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕಾರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ಪ್ರಮಾಣದಲ್ಲಿ ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರಗಳ ಪೂರೈಕೆ ಜಿಲ್ಲೆಗೆ ಆಗದಿರುವುದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿನ ರಸಗೊಬ್ಬರ ಕೊರತೆಯ ವಿಷಯವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ. ಪಿ ನಡ್ಡಾ ಅವರ ಗಮನಕ್ಕೆ ತರುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಜಿಲ್ಲೆಗೆ, ಏಪ್ರಿಲ್‌ನಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಬೇಡಿಕೆ 22,831 ಮೆಟ್ರಿಕ್ ಟನ್ ಇದ್ದು, ಇದುವರೆಗೆ 14,452 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಇದರಿಂದ 8,379 ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ. ಡಿಎಪಿ ರಸಗೊಬ್ಬರದ ಬೇಡಿಕೆ 16,409 ಮೆಟ್ರಿಕ್ ಟನ್ ಇದ್ದು, 8,767 ಮೆಟ್ರಿಕ್ ಟನ್ ಮಾತ್ರ ಲಭ್ಯವಾಗಿದ್ದು, ಸುಮಾರು 8 ಸಾವಿರ ಮೆಟ್ರಿಕ್ ಟನ್ ಕೊರತೆ ಎದುರಾಗಿದೆ ಎಂದು ವಿವರಿಸಿದರು. ಇದೇ ರೀತಿ ಕಾಂಪ್ಲೆಕ್ಸ್ ರಸಗೊಬ್ಬರದ ಬೇಡಿಕೆ 32,014 ಮೆಟ್ರಿಕ್ ಟನ್ ಇದ್ದು, 19,103 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಪರಿಣಾಮ ಸುಮಾರು 15 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಕೊರತೆ ಉಂಟಾಗಿದೆ ಎಂದು ಹೇಳಿದರು. ರಸಗೊಬ್ಬರಗಳ ಅಭಾವದಿಂದ ರೈತರು ಬೆಳೆಗಳಿಗೆ ಅಗತ್ಯ ಸಮಯದಲ್ಲಿ ಗೊಬ್ಬರ ಒದಗಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ ಅಗತ್ಯ ಪ್ರಮಾಣದ ರಸಗೊಬ್ಬರಗಳನ್ನು ಯಾದಗಿರಿ ಜಿಲ್ಲೆಗೆ ಪೂರೈಸುವ ಮೂಲಕ ರೈತರ ಸಂಕಷ್ಟ ನಿವಾರಿಸಬೇಕು ಎಂದು ಚಂದ್ರಶೇಖರಗೌಡ ಮಾಗನೂರ ಮನವಿ ಸಲ್ಲಿಸಿದ್ದಾರೆ.












Leave a Reply