ಯಾದಗಿರಿ ಅಪಘಾತ: ಒಂದೇ ಕುಟುಂಬದ 7 ಮಂದಿ ಸಜೀವ ದಹನ

Posted by

 

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನಗೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣ ನಾಯಕ, ಅವರ ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕುಟುಂಬವು ಸುರಪುರದಲ್ಲಿರುವ ಮನೆ ದೇವರ ದರ್ಶನ ಪಡೆದು ವಾಪಸ್ಸು ಸಿರವಾರ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಶಾಂತಪುರ ಕ್ರಾಸ್ ಬಳಿ ಖಾಸಗಿ ವಿಆರ್‌ಎಲ್ ಬಸ್ ಹಾಗೂ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿಗೆ ತಕ್ಷಣ ಬೆಂಕಿ ತಗುಲಿ, ಅದರಲ್ಲಿದ್ದ ಎಲ್ಲರೂ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ನಂತರ ಬಸ್ ಮತ್ತು ಕಾರು ಎರಡೂ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರೂ, ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ.

ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಶೋಕ ವಾತಾವರಣ ಉಂಟುಮಾಡಿದ್ದು, ಸಾವಿನ ನಿಖರ ಸಂಖ್ಯೆ ಹಾಗೂ ಇತರ ವಿವರಗಳ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

Suddi Belaku