ಮಹಿಳಾ ಮೀಸಲಾತಿ ವಿರೋಧ ಮಹಿಳೆಯರಿಗೆ ಅಪಮಾನ: ಲಲಿತಾ ಅನಪುರ ಕಿಡಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏ.22: ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಪ್ರಧಾನಮಂತ್ರಿ Narendra Modi ಕೈಗೊಂಡ ಪ್ರಯತ್ನಕ್ಕೆ ವಿಪಕ್ಷಗಳು ಅಡ್ಡಿಯಾಗಿರುವುದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದರೆ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗುತ್ತಿತ್ತು. ಆದರೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಿರೋಧದಿಂದ ಅವರ ಮಹಿಳಾ ವಿರೋಧಿ ನಿಲುವು ಬಯಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕ Rahul Gandhi ಸೇರಿದಂತೆ ವಿಪಕ್ಷಗಳು ಮಹಿಳಾ ವಿಚಾರದಲ್ಲಿ ಕೇವಲ ತೋರಿಕೆಯ ಕಾಳಜಿ ತೋರಿಸುತ್ತಿವೆ. ಮಹಿಳಾ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಚಿಂತನೆಗೆ ಧಕ್ಕೆ ತಂದಿವೆ ಎಂದು ಟೀಕಿಸಿದರು.

ಒಬ್ಬ ಸಂಸದರು ಲಕ್ಷಾಂತರ ಮತದಾರರನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅಗತ್ಯ. ಆದರೆ ಪ್ರತಿಪಕ್ಷಗಳು ಈ ದಿಸೆಯಲ್ಲಿ ಸಕಾರಾತ್ಮಕ ನಿಲುವು ತಾಳಲಿಲ್ಲ ಎಂದು ಹೇಳಿದರು.

ಮಹಿಳಾ ಸಬಲೀಕರಣದ ದಿಸೆಯಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜಲ ಜೀವನ ಮಿಷನ್ ಮೂಲಕ ಮನೆಗಳಿಗೆ ಕುಡಿಯುವ ನೀರು, ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ, ಶೌಚಾಲಯ ನಿರ್ಮಾಣ ಹಾಗೂ ಮಹಿಳೆಯರ ಹೆಸರಿನಲ್ಲಿ ಮನೆ ಹಕ್ಕುಗಳ ವಿತರಣೆ ಸೇರಿದಂತೆ ಕೋಟ್ಯಾಂತರ ಮಹಿಳೆಯರಿಗೆ ನೇರ ಪ್ರಯೋಜನ ತಲುಪಿಸಲಾಗಿದೆ ಎಂದು ವಿವರಿಸಿದರು.

ಮೋದಿಯವರು ವಂಶಪಾರಂಪರ್ಯದಿಂದ ಪ್ರಧಾನಿಯಾಗಿಲ್ಲ; ಜನರ ವಿಶ್ವಾಸದಿಂದ ಮೂರನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ಒಬಿಸಿ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ನೀಡಿರುವುದು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ ಎಂದರು.

ಕಾಂಗ್ರೆಸ್ ಪಕ್ಷವು ದೀರ್ಘಕಾಲ ಆಡಳಿತ ನಡೆಸಿದರೂ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲಿಲ್ಲ. ಮಂಡಲ್ ವರದಿ ಜಾರಿಗೆ ಹಿಂದೇಟು ಹಾಕಿದ ಹಿನ್ನೆಲೆ ಅವರ ನಿಲುವು ಜನರಿಗೆ ತಿಳಿದಿದೆ ಎಂದು ಹೇಳಿದರು.

ಬಿಜೆಪಿ ಮಹಿಳಾ ನಾಯಕತ್ವಕ್ಕೆ ಸದಾ ಉತ್ತೇಜನ ನೀಡಿದೆ. Sushma Swaraj, Uma Bharti, Vasundhara Raje, Anandiben Patel ಅವರಿಗೆ ಸಿಎಂ ಸ್ಥಾನ ನೀಡಿರುವುದನ್ನು ಸ್ಮರಿಸಿದರು. ಪ್ರಥಮ ಆದಿವಾಸಿ ಮಹಿಳೆ Droupadi Murmu ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿರುವುದೂ ಮಹಿಳಾ ಸಬಲೀಕರಣದ ಉದಾಹರಣೆ ಎಂದರು.

ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ವಿಷಯಗಳಲ್ಲಿ ನಿರಂತರ ವಿರೋಧದ ರಾಜಕಾರಣ ಮಾಡುತ್ತಿದೆ. 370ನೇ ವಿಧಿ ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಸಿಎಎ, ಜಿಎಸ್‌ಟಿ, ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ವಿಷಯಗಳಲ್ಲೂ ವಿರೋಧ ವ್ಯಕ್ತಪಡಿಸಿದೆ ಎಂದು ಆರೋಪಿಸಿದರು.

ಜನಸಂಖ್ಯೆ ಆಧಾರದಲ್ಲಿ ಜನಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವನೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಸಂಸದರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವಿತ್ತು. ಆದರೆ ಇದಕ್ಕೂ ವಿಪಕ್ಷಗಳು ಅಡ್ಡಿಯಾಗಿವೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಚುನಾವಣೆ ಗೆಲ್ಲುವುದೇ ಗುರಿಯಾಗಿದ್ದು, ಬಿಜೆಪಿಗೆ ರಾಷ್ಟ್ರ ನಿರ್ಮಾಣವೇ ಮುಖ್ಯ ಉದ್ದೇಶ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಹಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರಡ್ಡಿ ನಾಯ್ಕಲ್, ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ದೇವಿಂದ್ರನಾಥ ನಾದ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಸುನಿತಾ ಚೌವ್ಹಾಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರುಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಹಾಗೂ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku