ಹತ್ತಿಕುಣಿ ಕಾಲುವೆ ದುರಸ್ತಿ ಯೋಜನೆ | ₹72 ಕೋಟಿ ಅನುದಾನ : ಚಿಂಚನಸೂರ್ ಹರ್ಷ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 18 :  ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರದ ವ್ಯಾಪ್ತಿಯ ಹತ್ತಿಕುಣಿ ಕ್ಲಸ್ಟರ್ ಯೋಜನೆಗೆ ಸಂಬಂಧಿಸಿದ ₹72 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯ ವಿನ್ಯಾಸ ವರದಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯು ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂದಳ್ಳಿ ಮತ್ತು ಮಂಡರಗಿ ಸೇರಿದಂತೆ ಬರಪೀಡಿತ ಗ್ರಾಮಗಳ ಸುಮಾರು 5,300 ಎಕರೆ ಕೃಷಿಯೋಗ್ಯ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದೆ. ಇದರ ಮೂಲಕ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಹತ್ತಿಕುಣಿ ಜಲಾಶಯ ಕಾಲುವೆಯ ದುರಸ್ತಿಯೂ ಈ ಅನುದಾನದಲ್ಲಿ ನಡೆಯಲಿದೆ. ಗುರುಮಠಕಲ್‌ ಮತಕ್ಷೇತ್ರದ ರೈತರ ದಶಕಗಳ ಕಾಲದ ಕನಸಾಗಿದ್ದ ಹತ್ತಿಕುಣಿ ಕಾಡಾ ನಾಲಾ ಆಧುನೀಕರಣ ಯೋಜನೆಗೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದರಿಂದ, ಹತ್ತಿಕುಣಿ, ಕಟಗಿ ಶಹಾಪುರ, ಹೊನಗೇರಿ, ಯಡ್ಡಳ್ಳಿ, ಬಂದಳ್ಳಿ ಸೇರಿದಂತೆ ಮುಂತಾದ ಗ್ರಾಮಗಳ ವ್ಯಾಪ್ತಿಯ ಸುಮಾರು 5,300 ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಬಾಬುರಾವ್ ಚಿಂಚನಸೂರ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೂ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೃತಜ್ಞತೆಗಳನ್ನು ಪ್ರಕಟಣೆಯಲ್ಲಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku