
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಬಡತನ ಎನ್ನುವುದು ಸಾಧನೆಗೆ ಅಡ್ಡಿಯಾಗಬಾರದು ಯಾದಗಿರಿಯನ್ನು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಲು ಶಿಕ್ಷಣವೊಂದೇ ಪ್ರಬಲ ಅಸ್ತ್ರ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಅವರು ಅಭಿಪ್ರಾಯಪಟ್ಟರು.
ಯಾದಗಿರಿ ನಗರದ
ಕೊಲ್ಲೂರು ಮಲ್ಲಪ್ಪ ಮೆಮೋರಿಯಲ್ ಕಾಲೇಜು ಮತ್ತು ಗಂಗೋತ್ರಿ ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ನೂರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಹಿಂದುಳುದಿರುವಿಕೆಗೆ ಕಾರಣ ಮತ್ತು ಪರಿಹಾರ ಯಾದಗಿರಿ ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿಯಲು ನಮ್ಮಲ್ಲಿರುವ ಬಡತನ ಮತ್ತು ಕೀಳುರಿಮೆಯೇ ಮುಖ್ಯ ಕಾರಣ ಎಂದು ಅವರು ವಿಶ್ಲೇಷಿಸಿದರು. “ನಾವು ಬಡವರು ಅಥವಾ ನಮ್ಮಿಂದ ಸಾಧ್ಯವಿಲ್ಲ ಎಂಬ ಭಾವನೆಯನ್ನು ಮೊದಲು ಬಿಡಬೇಕು. ಈ ಜಿಲ್ಲೆಯ ಭವಿಷ್ಯ ನಿಮ್ಮ ಕೈಯಲ್ಲಿದೆ. ಶಿಕ್ಷಣದ ಮೂಲಕ ಮಾತ್ರ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ,” ಎಂದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಪ್ರಮುಖವಾಗಿ ಮೂರು ಅಂಶಗಳಾದ ಶಿಸ್ತು, ಸಮಯ ಪಾಲನೆ, ದೃಢ ನಿರ್ಧಾರವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಶಿಸ್ತುಬದ್ಧ ಜೀವನವೇ ಯಶಸ್ಸಿನ ಮೊದಲ ಮೆಟ್ಟಿಲು, ಹೋದ ಸಮಯ ಮರಳಿ ಬಾರದು, ಹಾಗಾಗಿ ಪ್ರತಿ ನಿಮಿಷವನ್ನೂ ಜ್ಞಾನಾರ್ಜನೆಗೆ ಬಳಸಿ, ಜೀವನದಲ್ಲಿ ಅಡೆತಡೆಗಳು ಬಂದಾಗ ಎದೆಗುಂದದೆ, ಗುರಿಯತ್ತ ದೃಢವಾದ ಹೆಜ್ಜೆ ಇಡಬೇಕು ಎಂದರು.
ತಮ್ಮ ವಿದ್ಯಾರ್ಥಿ ಜೀವನದ ಕಷ್ಟ ಸುಖಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ತಾವು ಓದುತ್ತಿದ್ದ ಕಾಲದಲ್ಲಿ ಎದುರಿಸಿದ ಸವಾಲುಗಳು ಮತ್ತು ಅವುಗಳನ್ನು ಮೆಟ್ಟಿ ನಿಂತ ರೀತಿಯನ್ನು ವಿವರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಆಶಪ್ಪ ಪೂಜಾರಿ ಸಹಾಯಕ ಆಯುಕ್ತರು ಮೈಸೂರು ಹಾಗೂ ಸಂಸ್ಥೆಯ ಮಾರ್ಗದರ್ಶಕರು ಮಲ್ಲಿಕಾರ್ಜುನ ಮುಂಡರಗಿ ಕೆಎಂಎಂ ಕಾಲೇಜ್ ಪ್ರಾಂಶುಪಾಲರು ಎ ಬಿ ಪೂಜಾರಿ ಸಾಹಿತಿಗಳು ರವಿಕಾಂತ ಕಸವಿ ನಳಂದಾ ಕಾಲೇಜು ಪ್ರಾಂಶುಪಾಲರು ಮಲ್ಲಿಕಾರ್ಜುನ ಅಲ್ಲಿಪುರ ಶಿಕ್ಷಕರು ಶರಣು ಪೂಜಾರಿ ನಿಲಯ ಪಾಲಕರು ನಿಂಗಪ್ಪಾ ಬೇನಕನಹಳ್ಳಿ ಭೀಮರಾಯ ಅನಪೂರು ಗಂಗೋತ್ರಿ ಕೋಚಿಂಗ್ ಸೆಂಟರ್‌ನ ಸಿಬ್ಬಂದಿ ವರ್ಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶರಣಪ್ಪ ಮಾನೆಗಾರ್ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಹರ್ಷ ವ್ಯಕ್ತಪಡಿಸಿದರು.










Leave a Reply