ಶಿವಪೂರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ – ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ವಡಗೇರಾ : ತಾಲ್ಲೂಕಿನ ಗೊನಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿವಪೂರ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮದ ಯುವ ಮುಖಂಡ ಸಂತೋಷ್ ಗೌಡ ಶಿವಪೂರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಮಸ್ಥರು ದಿನನಿತ್ಯ ಹನಿ ನೀರಿಗೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ನಿತ್ಯ ಪರದಾಡುತ್ತಿದ್ದು, 2 ಕಿ.ಮೀ. ದೂರ ನಡೆದುಕೊಂಡು ಹೋಗಿ ನೀರನ್ನು ತರುತ್ತಿರುವುದು ಆಡಳಿತ ಕಾರ್ಯವೈಖ್ಯರಿಯ ದುಃಸ್ಥಿತಿಯನ್ನು ಬಿಂಬಿಸುತ್ತಿದೆ.
ಕುಡಿಯುವ ನೀರು ಅಷ್ಟೇ ಅಲ್ಲ ದಿನಬಳಕೆಯ ನೀರಿಗೂ ಸಹ ತೊಂದರೆ ಗ್ರಾಮದಲ್ಲಿನ ಹಳೆಯ ಬಾವಿಯಲ್ಲಿನ ನಿರು ಅಸ್ವಚ್ಛತೆಯಿಂದ ಕೂಡಿದ್ದು ಚರಂಡಿ ನೀರಿನಂತಾದ ನೀರನ್ನು ದಿನಬಳಕೆ ಹಾಗೂ ಜಾನುವಾರುಗಳಿಗೆ ಕುಡಿಯಲು ಬಳಸುತ್ತಿದ್ದಾರೆ. ಇನ್ನು ಕುಡಿಯುವ ನೀರು ತರಲು ಗ್ರಾಮದ ಹತ್ತಿರದ ಖಾಸಗಿ ವ್ಯಕ್ತಿಗಳ ಬೋರ್ ವೆಲ್ ಗೆ ಹೋಗಿ ಗಂಟೆಗಟ್ಟಲೆ ನಿಂತು ತರುತ್ತಾರೆ.‌ ಸುಮಾರು 2 ಕಿ.ಮೀ ದೂರ ನಡೆದುಕೊಂಡು ಹೋಗಿ, ಬೈಕ್, ಟ್ರ್ಟಾಕ್ಟರ್, ಜೆಸಿಬಿ ತೆಗೆದುಕೊಂಡು ಹೋಗಿ ನೀರು ತರುವಂತ ಪರಿಸ್ಥಿತಿ ಬಂದಿದೆ ಇಡೀ ಗ್ರಾಮ ನಳದ ನೀರಿನ ಮೇಲೆ ಅವಲಂಬಿತವಾಗಿದ್ದು, ಬೇರೆ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ.

ಒಂದು ದಿನ ನಳದ ನೀರು ಬರದಿದ್ದರೇ ನೀರಿನ ಹಾಹಾಕಾರ ಎದುರಾಗೀತ್ತದೆ. ಹೀಗಿರುವಾಗ ಪದೇ ಪದೇ ನಳದ ಸಮಸ್ಯೆ ಎದುರಾಗಿ ಜನರು ತೊಂದರೆ ಅನುಭವಿಸುತ್ತಿದ್ದರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತ್ರ ತೀವ್ರ ನಿರ್ಲಕ್ಷ ವಹಿಸುವುದರ ಜೊತೆಗೆ ಸರಿಯಾಗಿ ಪಂಚಾಯಿತಿಗೆ ಬಾರದೆ ಸಾರ್ವಜನಿಕರ ಕೈಗೂ ಸಿಗದೇ ಮೊಬೈಲಗೆ ಕರೆ ಮಾಡಿದರು ಕರೆ ಸ್ವೀಕರಿಸಲ್ಲ ಎಂದು ದೂರಿದ್ದಾರೆ. ಇಂಥಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಸಾರ್ವಜನಿಕರು ಊರಲ್ಲಿನ ಬೋರ್ ವೇಲ್ ನೀರು ಕುಡಿಯಲು ಯೋಗ್ಯವಿಲ್ಲ. ಹಾಗೂ ಇದ್ದ ಒಂದೆರಡು ಬೋರ್ ವೆಲ್ ಗಳು ಕೂಡಾ ಕೆಟ್ಟು ಹೋಗಿವೆ.

ಇನ್ನು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೂ ಮೊದಲೇ ಹಾಳಾಗಿ ಹೋಗಿದೆ. ಇನ್ನು ಜನಜೀವನ ಮಿಷನ್ ಯೋಜನೆಯಂತೂ ಹಳ್ಳ ಹಿಡಿದಿದ್ದು, ಇದರಿಂದ ಊರು ತುಂಬಾ ಗುಂಡಿಗಳು ಬಿದ್ದಿವೆಯೇ ಹೊರತು ಒಂದು ಹನಿ ನೀರು ಕೂಡ ಈ ಯೋಜನೆಯಿಂದ ಬಂದಿಲ್ಲ. ಇನ್ನು ನಳದ ನೀರಿನ ಟ್ಯಾಂಕ್ ಗೆ ಸರಬರಾಜು ಮಾಡುವ ಬೋರ್ ವೆಲ್ ಸಮರ್ಪಕ ನಿರ್ವಹಣೆ ಆಗದೇ ಇರುವುದರಿಂದ ಪದೇ ಪದೇ ನೀರಿನ ಸಮಸ್ಯೆ ಉಲ್ಬಣ ಆಗುತ್ತಲೇ ಇರುತ್ತದೆ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.
ಸರ್ಕಾರ ನೀರಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಹಣವು ನೀರಿನಂತೆ ಪೊಲಾಗಿದೆ ಆದರೆ ನೀರೆ ಬರುತ್ತಿಲ್ಲ ಬಿರು ಬಿಸಿಲಿನ ನಡುವೆ ನೀರಿನ ಸಮಸ್ಯೆ ಎದುರಾಗಿದ್ದು, ಹನಿ ನೀರಿಗೂ ಪರದಾಟ ತಪ್ಪುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಕೂಡಲೇ ಬಗೆಹರಿಸದಿದ್ದರೆ ಗ್ರಾಮಸ್ಥರೊಂದಿಗೆ ಸೆರಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡುವುದಾಗಿ ಶಿವಪೂರ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku