
ಸುದ್ದಿ ಬೆಳಕು ವಾರ್ತೆ
ಸುರಪುರ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿ., ಯಾದಗಿರಿ ಹಾಗೂ ಯಾದಗಿರಿ ಸಹಕಾರ ಇಲಾಖೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸಹಕಾರ ಸಂಘ ನಿ, ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಆಡಳಿತ ಮಂಡಳಿ ನಿರ್ದೇಶಕರಿಗಾಗಿ ‘ಕ್ಲಸ್ಟರ್ ತರಬೇತಿ ಕಾರ್ಯಕ್ರಮ’ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಶರಣಯ್ಯ ಸ್ವಾಮಿ ನೀಲಗಿರಿಮಠ, “ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಸಾರ್ವಜನಿಕರ ಆರ್ಥಿಕ ಬಲವರ್ಧನೆಗೆ ಪ್ರೇರಕ ಶಕ್ತಿಯಾಗಿದ್ದು, ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿವೆ. ಆಧುನಿಕ ಯುಗದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರ ತತ್ವವೇ ಮೂಲ ಮಂತ್ರವಾಗಿದೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಹಕಾರಿ ಶ್ರೀ ಕರಣಯ್ಯ ಸ್ವಾಮಿ ನೀಲಗಿರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಸುದೀರ್ಘ ಅನುಭವಗಳನ್ನು ಹಂಚಿಕೊಂಡರು. “ತರಬೇತಿಯಲ್ಲಿ ಆಡಳಿತ ಮಂಡಳಿ ನಿರ್ದೇಶಕರ ಜವಾಬ್ದಾರಿಗಳು, ಹಕ್ಕುಗಳು, ಕರ್ತವ್ಯಗಳು ಹಾಗೂ ಇಲಾಖೆಯಿಂದ ಸಿಗುವ ವಿವಿಧ ಯೋಜನೆಗಳ ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ. ಇಲ್ಲಿ ಗಳಿಸಿದ ಜ್ಞಾನವನ್ನು ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಂಡು, ಸಂಸ್ಥೆಯನ್ನು ಪ್ರಗತಿಯತ್ತ ಮುನ್ನಡೆಸಬೇಕು” ಎಂದು ಅವರು ಕರೆ ನೀಡಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಸುರಪುರದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀ ರವಿಕುಮಾರ್ ಅವರು, ಕ್ಲಸ್ಟರ್ ತರಬೇತಿಯ ಉದ್ದೇಶ ಹಾಗೂ ಮಹಾಮಂಡಳದ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.
ಜಿಲ್ಲಾ ಸಹಕಾರ ಶಿಕ್ಷಕಿ ಶ್ರೀಮತಿ ಸುಜಾತ ಮಠ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಒಕ್ಕೂಟದ ವ್ಯವಸ್ಥಾಪಕ ಶ್ರೀ ಈರಪ್ಪಣ್ಣ ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷ ಶ್ರೀ ಶಿವಕುಮಾರ್ ಪಂಚಾಂಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಶ್ರೀ ಶಿವರುದ್ರ ಹಾಗೂ ಸಿಬ್ಬಂದಿ ವರ್ಗದ ಶ್ರೀಮತಿ ಶಿವಲೀಲಾ, ಸಿದ್ದಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.












Leave a Reply