ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಫಲಿತಾಂಶ – ರಾಷ್ಟ್ರೀಯ ಚಿಂತನೆಗೆ ಐತಿಹಾಸಿಕ ವಿಜಯ: ರಾಚನಗೌಡ ಮುದ್ನಾಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿಯು ಸಾಧಿಸಿರುವ ಐತಿಹಾಸಿಕ ದಿಗ್ವಿಜಯವು ದೇಶದ ರಾಜಕಾರಣದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದು ಯಾದಗಿರಿಯ ಹಿರಿಯ ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ ಹರ್ಷ ವ್ಯಕ್ತಪಡಿಸಿದ್ದಾರೆ.
ನಿನ್ನೆ ಹೊರಬಿದ್ದ ಫಲಿತಾಂಶಗಳ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ ಹಾಗೂ ಜನರ ಆಶೀರ್ವಾದಕ್ಕೆ ಸಾಕ್ಷಿಯಾಗಿದೆ.
ಅಸ್ಸಾಂನಲ್ಲಿ ಸತತವಾಗಿ ಎರಡನೇ ಬಾರಿಗೆ ಬಿಜೆಪಿ 100ರ ಗಡಿ ದಾಟುವ ಮೂಲಕ ಸುಭದ್ರ ಆಡಳಿತಕ್ಕೆ ಮುದ್ರೆ ಒತ್ತಿದೆ. ಪುದುಚೇರಿಯಲ್ಲೂ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ವಿಜಯಪತಾಕೆ ಹಾರಿಸಿರುವುದು ಬದಲಾವಣೆಯ ಗಾಳಿಯನ್ನು ಬಿಂಬಿಸುತ್ತಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ತುಷ್ಟೀಕರಣ ಮತ್ತು ವಂಶಾಡಳಿತದ ರಾಜಕಾರಣವನ್ನು ದೇಶದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದು, ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿಯೇ ಅಂತಿಮ ಎಂಬುದು ಈ ಚುನಾವಣಾ ಫಲಿತಾಂಶಗಳಿಂದ ಸಾಬೀತಾಗಿದೆ. ಈ ಭವ್ಯ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ದಕ್ಷ ನಾಯಕತ್ವಕ್ಕೆ ರಾಚನಗೌಡ ಮುದ್ನಾಳ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ವಿಜಯೋತ್ಸವದ ಸಂಭ್ರಮವು ಯಾದಗಿರಿ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku