ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಎಂ. ನಾರಾಯಣ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿ. ಹಾಗೂ ಸಹಕಾರ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ಯಾದಗಿರಿ ಮತ್ತು ಗುರುಮಿಟ್ಕಲ್ ತಾಲೂಕಿನ ಮಹಿಳಾ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರ ಇಲಾಖೆ ಹಾಗೂ ಇತರ ಇಲಾಖೆಗಳ ಮೂಲಕ ಮಹಿಳೆಯರಿಗಾಗಿ ಲಭ್ಯವಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯಿಂದ ಸಹಕಾರ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಮಾತಾ ಮಾಣಿಕೇಶ್ವರ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ನಾಗರತ್ನ ಅನಪುರ ಉದ್ಘಾಟಿಸಿದರು. ಸಹಕಾರ ಪಿತಾಮಹರ ಭಾವಚಿತ್ರಕ್ಕೆ ಸಮಾಜ ಸೇವಕಿ ಭ್ರಮರಾಂಬ ವಿ. ನಾಯ್ಕಲ್ ಪುಷ್ಪನಮನ ಸಲ್ಲಿಸಿದರು.

ಸಹಕಾರ ಕ್ಷೇತ್ರದ ಜ್ಞಾನ ಅಗತ್ಯ

ಒಕ್ಕೂಟದ ವೃತ್ತಿಪರ ನಿರ್ದೇಶಕ ವೈಜನಾಥ ಪಾಟೀಲ್ ತುಮಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಕ್ಷೇತ್ರದ ಕುರಿತು ಹೆಚ್ಚಿನ ಜ್ಞಾನ ಹಾಗೂ ಅರಿವು ಪಡೆದುಕೊಳ್ಳುವ ಮೂಲಕ ಮಹಿಳೆಯರು ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುವುದು ಅಗತ್ಯವಾಗಿದೆ ಎಂದು ಒಕ್ಕೂಟದ ನಿರ್ದೇಶಕ ನಾಜಿಮ್ ಅಹಮದ್ ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಮತಾ ಪ್ರಭು ದೊರೆ ಮಾತನಾಡಿ, ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳು ಇಂದು ಹೆಚ್ಚಿನ ಮಹತ್ವ ಪಡೆದಿವೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರ ಸಂಘಗಳು ಪ್ರಮುಖ ಆಶ್ರಯವಾಗಿವೆ ಎಂದು ಹೇಳಿದರು.

ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ

ಸಹಕಾರ ಕ್ಷೇತ್ರದಿಂದ ದೊರೆಯುವ ಪ್ರಯೋಜನಗಳು ಹಾಗೂ ಉದ್ಯೋಗಾವಕಾಶಗಳ ಕುರಿತು ಕೆಐಸಿಎಂ ಕಲಬುರಗಿ ಪ್ರಾಂಶುಪಾಲ ಅರುಣಕುಮಾರ್ ಬಿ. ಹರಸೂರು ವಿಶೇಷ ಉಪನ್ಯಾಸ ನೀಡಿದರು.

ಸಹಕಾರ ಸಂಘಗಳ ರಚನೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಯಾದಗಿರಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿಯ ಶಿವಮಂಗಳ ವಿಶೇಷವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಸಿದ್ದಪ್ಪ ಹೊಟ್ಟಿ, ಆನಂದ ರೆಡ್ಡಿ, ವೃತ್ತಿಪರ ನಿರ್ದೇಶಕ ಪ್ರಕಾಶ್ ಅಂಗಡಿ ಕನ್ನಳ್ಳಿ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಮಂಜುನಾಥ ಜೋಗುರ, ಇಲಾಖೆ ಅಧಿಕಾರಿ ಶಮ್ಸುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಕ್ಕೂಟದ ದ್ವಿತೀಯ ದರ್ಜೆ ಸಹಾಯಕ ಸಿದ್ಧನಗೌಡ ಸ್ವಾಗತಿಸಿದರು. ಸುಜಾತ ಮಠ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ವ್ಯವಸ್ಥಾಪಕ ವಿರುಪಣ್ಣ ವಂದನಾರ್ಪಣೆ ಸಲ್ಲಿಸಿದರು.

ಯಾದಗಿರಿ ಮತ್ತು ಗುರುಮಿಟ್ಕಲ್ ತಾಲೂಕಿನ ವಿವಿಧ ಮಹಿಳಾ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಮಹಿಳೆಯರು ಭಾಗವಹಿಸಿ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

↑
Suddi Belaku