ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟುವುದರ ಜತೆಗೆ ಅಮೂಲ್ಯ ಮಾನವ ಜೀವಗಳನ್ನು ರಕ್ಷಿಸಬಹುದು ಎಂಬ ಸಂದೇಶ ಸಾರುವ ಉದ್ದೇಶದಿಂದ ಗುರುವಾರ ನಗರದಲ್ಲಿ ಸಂಚಾರ ನಿಯಮಗಳ ಪಾಲನಾ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಆಟೋ ಚಾಲಕರ ಸಂಘ, ಕಾರು ಮತ್ತು ಜೀಪ್ ಚಾಲಕರ ಸಂಘ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದಲ್ಲಿ ನಗರದ ಚಿರಂಜೀವಿ ಪ್ರೌಢಶಾಲೆಯಿಂದ ಸುಭಾಷ್ ಚೌಕ್ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಾಸಿದ್ದಾರಾಧ್ಯ ಎಚ್.ಜೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾಥಾದಲ್ಲಿ ಸಾರ್ವಜನಿಕರು, ವಾಹನ ಚಾಲಕರು ಹಾಗೂ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಹೆಲ್ಮೆಟ್ ಧರಿಸುವುದು, ಸೀಟ್ಬೆಲ್ಟ್ ಕಡ್ಡಾಯವಾಗಿ ಬಳಸುವುದು, ನಿಗದಿತ ವೇಗದ ಮಿತಿ ಪಾಲಿಸುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸದಿರುವುದು ಸೇರಿದಂತೆ ವಿವಿಧ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು.














Leave a Reply