ಸೆ.27ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 27 ರಂದು ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಸತ್ತೂರಿನ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ಜರುಗಲಿದೆ ಎಂದರು.

ಶಿರಹಟ್ಟಿ ಜಗದ್ಗುರು ಶ್ರೀ ಫಕೀರೇಶ್ವರ ಭಾವೈಕ್ಯತಾ ಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮಾಜ ಸೇವೆ, ಶಿಕ್ಷಣ, ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು.

ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ವಿಧಾನಸಭೆಯ ನೂತನ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹಾಗೂ ನೂತನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ವಿಶೇಷ ಗೌರವ ಸನ್ಮಾನ ನೆರವೇರಿಸಲಾಗುವುದು.

ಕಾರ್ಯಕ್ರಮದಲ್ಲಿ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪುರ, ಬಸನಗೌಡ ಬಾದರ್ಲಿ ಮತ್ತು ವೈ.ಎಂ. ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದರೊಂದಿಗೆ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಎ.ಬಿ. ಮಾಲಕರಡ್ಡಿ, ಹೆಚ್. ಏಕಾಂತಯ್ಯ, ಅಜಯಕುಮಾರ್ ಸರನಾಯಕ, ಹಾಲಪ್ಪ ಆಚಾರ್, ವೆಂಕಟರಾವ್ ನಾಡಗೌಡ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಜಿ. ವೀರಪ್ಪ ಕೆಸರಟ್ಟಿ, ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ದೊಡ್ಡನಗೌಡ ಪಾಟೀಲ, ಬಸವರಾಜ ಪಾಟೀಲ ಇಟಗಿ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಸೇರಿದಂತೆ 25ಕ್ಕೂ ಹೆಚ್ಚು ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ.

ಯುವ ನಾಯಕತ್ವವನ್ನು ಪ್ರತಿನಿಧಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ಮತ್ತು ರಾಜ್ಯ ನಿರ್ದೇಶಕ ಸಂಗನಗೌಡ ಮಿಥುನ ಜಿ. ಪಾಟೀಲ ಆಗಮಿಸಲಿದ್ದಾರೆ.

ಇದು ಕೇವಲ ಸನ್ಮಾನ ಕಾರ್ಯಕ್ರಮವಲ್ಲ, ರೆಡ್ಡಿ ಸಮುದಾಯದ ಒಗ್ಗಟ್ಟು, ಶೈಕ್ಷಣಿಕ ಮತ್ತು ರಾಜಕೀಯ ಜಾಗೃತಿಯನ್ನು ಪ್ರದರ್ಶಿಸುವ ವೇದಿಕೆಯಾಗಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಖರಗೌಡ ಮಾಲೀಪಾಟೀಲ ವಹಿಸಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಬಾಪುಗೌಡ ಪಾಟೀಲ ಅಗತೀರ್ಥ, ಭೀಮನಗೌಡ ಕ್ಯಾತ್ನಾಳ, ಬಸನಗೌಡ ವಠಾರ ರಾಜನಕೋಳೂರ, ಪ್ರಕಾಶರೆಡ್ಡಿ ಮುದನೂರ, ಸಿದ್ರಾಮರೆಡ್ಡಿ ಕಾಮರೆಡ್ಡಿ, ವಿರುಪಾಕ್ಷಯ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku