ರಾಯಚೂರಿನಲ್ಲಿ ‘ನಶಾ ಮುಕ್ತ್ ಯುವಾ ಫಾರ್ ವಿಕಸಿತ ಭಾರತ್’ ಅಭಿಯಾನಕ್ಕೆ ಚಾಲನೆ

Posted by

ಸುದ್ದಿ ಬೆಳಕು ವಾರ್ತೆ

ರಾಯಚೂರು : ಭಾರತ ಸರಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯ ಮೈ ಭಾರತ್ – ಎನ್ಎಸ್ಎಸ್ ನಿರ್ದೇಶನಾಲಯದ ವತಿಯಿಂದ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಶಾ ಮುಕ್ತ್ ಯುವಾ ಫಾರ್ ವಿಕ್ಸಿತ್ ಭಾರತ್ ಸಂಕಲ್ಪ ಅಭಿಯಾನದ ಅಂಗವಾಗಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಆಯೋಜಿಸಿದ್ದ ಸದರಿ ಕಾರ್ಯಮವನ್ನು ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ಡಾ. ಸತೀಶ್, ತಾಲೂಕಾ ಆರೋಗ್ಯಾಧಿಕಾರಿ ಇವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ ನಶೆ ಅಥವಾ ವ್ಯಸನವೆಂದರೆ ಪ್ರಜ್ಞಾಹೀನ ಅವಸ್ಥೆ. ಅದಕ್ಕೆ ಕಾರಣವಾಗುವ ಪದಾರ್ಥಗಳು ವಿಭಿನ್ನ ಬಗೆಗಳಲ್ಲಿದ್ದು ದುರ್ಬಲ ಮನಸ್ಸಿನ ವ್ಯಕ್ತಿಗಳನ್ನು ಮತ್ತು ಅದರ ಹಾನಿಯ ಬಗ್ಗೆ ಅರಿವಿಲ್ಲದ ಜನರನ್ನು ಬೇಗ ತನ್ನತ್ತ ಆಕರ್ಷಿಸುತ್ತವೆ. ಹೀಗಾಗಿ ಇಂದಿನ ಯುವ ಜನತೆ ವಿಶೇಷವಾಗಿ ಭಾರತದಲ್ಲಿ 15 ರಿಂದ 30 ವರ್ಷ ವಯೋಮಾನದ ಯುವ ಸಮುದಾಯ ದುರ್ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಸಮೃದ್ಧ ಮಾನವ ಸಂಪನ್ಮೂಲವಾಗಬೇಕಿದ್ದ ಯುವ ಸಮುದಾಯ ಮತ್ತೇರಿಸುವ ಪದಾರ್ಥಗಳ ಸೇವನೆಗೆ ದಾಸರಾಗಿ ಭವಿಷ್ಯ ಮತ್ತು ಜೀವನದ ಸವಾಲಿನ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ. ಇಂಥ ಸಾಮಾಜಿಕ ಕಳಂಕದಿಂದ ದೂರವಿದ್ದು ಸ್ವಾಭವಿಷ್ಯ ಮತ್ತು ರಾಷ್ಟ್ರ ಕಟ್ಟುವ ಕಡೆ ಗಮನಹರಿಬೇಕು. ನಶಾ ಮುಕ್ತ್ ಯುವಾ ಫಾರ್ ವಿಕ್ಸಿತ್ ಭಾರತ್ ಸಂಕಲ್ಪ ಅಭಿಯಾನ ಇಂಥ ಸತ್ಕಾರ್ಯಕ್ಕೆ ಸಹಾಯಕವಾಗಿ ನಿಲ್ಲಲಿ ಎಂದು ಕರೆ ಕೊಟ್ಟರು.

ಅತಿಥಿಯಾಗಿ ಆಗಮಿಸಿದ್ದ ವಲಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಸರೋಜಾ ಮಾತನಾಡಿ ಹರೆಯದ ವಯಸ್ಸಿನಲ್ಲಿ ಸಹಜ ಆಕರ್ಷಣೆಗೆ ಒಳಪಡಬಹುದಾದ ವ್ಯಸನಗಳು ದುಶ್ಚಟಗಳು ಮತ್ತು ಅಂಥವುಗಳಿಂದ ದೂರವಿರಲು ಪರಿಹಾರೋಪಾಯಗಳ ಕುರಿತಾಗಿ ಸಭಿಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣಾ ಬಸವರಾಜ್ ವಿಕಸಿತ ಭಾರತಕ್ಕಾಗಿ ವ್ಯಸನಮುಕ್ತ ಯುವಾ – ನೂರು ವಾರಗಳ ಸಂಕಲ್ಪ ಅಭಿಯಾನದ ಉದ್ಘಾಟನಾ ಸಮಾರಂಭದ ಆಶಯದಂತೆ ಹಾಗೂ ಭಾರತ ಸರಕಾರದ ಒತ್ತಾಸೆಯಂತೆ ಯುವ ಸಮುದಾಯವನ್ನು ದುರ್ವ್ಯಸನಗಳಿಂದ ದೂರವಿಡಲು ಶ್ರಮಿಸುವುದಕ್ಕಾಗಿ ನಮ್ಮ ಕಾಲೇಜಿನ ಎನ್ಎಸ್ಎಸ್ ಘಟಕ ಎಂದಿನಂತೆ ಸದಾ ಬದ್ಧವಾಗಿದೆ. ಸರಕಾರದ ನಿರ್ದೇಶನ ಹಾಗೂ ಸಾಂದರ್ಭಿಕ ಮಾರ್ಗಸೂಚಿಗಳಾನುಸಾರ ನೂರು ವಾರಗಳ ಸದರಿ ಅಭಿಯಾನದಡಿಯಲ್ಲಿ ವಿವಿಧ ಹಾಗೂ ವಿಭಿನ್ನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿ ಹಮ್ಮಿಕೊಳ್ಳುವ ಮೂಲಕ ಯುವ ಸಮುದಾಯದ ಏಳಿಗೆಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಭಾರತ ಸರಕಾರದ ಮಹತ್ವಾಕಾಂಕ್ಷಿ ಅಭಿಯಾನವಾದ ನಶಾ ಮುಕ್ತ್ ಯುವಾ ಫಾರ್ ವಿಕ್ಸಿತ್ ಭಾರತ್ ಅಡಿಯಲ್ಲಿ ಸಪ್ಟೆಂಬರ್ 18 ರಿಂದ ಡಿಸೆಂಬರ್ ಕೊನೆಯ ದಿನದವರೆಗೆ 12 ವಾರಗಳ ಮೊದಲ ಹಂತದ ಅವಧಿಯಲ್ಲಿ ಮೈ ಹೆಲ್ತ್ – ಮೈ ಪ್ರೈಡ್, ಫಿಟ್ ಯೂಥ್ – ಅಡಿಕ್ಷನ್ ಫ್ರಿ ಯೂಥ್, ಲೈಫ್ ಸ್ಕಿಲ್ಸ್ ಮಂಥ್ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಯುವ ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮ ಪಾಲನೆಯೊಂದಿಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಲಾಗುವುದು ಎಂದು ಹೇಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ವಿಕಸಿತ ಭಾರತಕ್ಕಾಗಿ ವ್ಯಸನಮುಕ್ತ ಯುವಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಡಾ. ಜ್ಯೋತಿ ಸಿ ಕೆ, ಡಾ. ಸಯ್ಯದಾ ರಶೀದಾ ಪರ್ವೀನ್, ಶ್ರೀ ಶರಣಗೌಡ ಅತಿಥಿಗಳಾಗಿ ಆಹ್ವಾನಿತರಾಗಿದ್ದರು. ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಯಂ ಸೇವಕಿಯರಾದ ಜೆ ಎಸ್ ಸುಷ್ಮಾ, ಅನ್ನಪೂರ್ಣಾ, ಸುವರ್ಣಾ, ಸಂಗೀತಾ, ಭವಾನಿ, ಜಮುನಾ, ಜಮುಲಮ್ಮ, ಮಧುಲತಾ ಕಾರ್ಯಕ್ರಮವನ್ನು ಸಂಘಟಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದರು.

ನಾಡಗೀತೆಯ ಗಾಯನದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರಾಷ್ಟ್ರಗೀತೆಯ ಗಾಯನದೊಂದಿಗೆ ಮುಕ್ತಾಯಗೊಳಿಸಲಾಯಿತು.

You Might Also Like

Leave a Reply

Your email address will not be published. Required fields are marked *

Suddi Belaku