ಓಜೋನ್ ಪದರ ರಕ್ಷಣೆ ಮಾನವ ಆರೋಗ್ಯಕ್ಕೂ ಅಗತ್ಯ: ಡಾ. ಪುಷ್ಪಾ

Posted by

ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಓಜೋನ್ ದಿನಾಚರಣೆ

ಸುದ್ದಿ ಬೆಳಕು ವಾರ್ತೆ

ರಾಯಚೂರು : ಓಜೋನ್ ಪದರವು ಸೂರ್ಯನಿಂದ ಭೂಮಿಗೆ ಆಗಮಿಸುವ ಹಾನಿಕಾರಕ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಜೀವಜಗತ್ತನ್ನು ರಕ್ಷಿಸುವ ಪ್ರಮುಖ ನೈಸರ್ಗಿಕ ಕವಚವಾಗಿದೆ. ಓಜೋನ್ ಪದರದ ರಕ್ಷಣೆ ಪರಿಸರದ ಜತೆಗೆ ಮಾನವ ಆರೋಗ್ಯದ ಸುರಕ್ಷತೆಗೂ ನೇರವಾಗಿ ಸಂಬಂಧಿಸಿದೆ ಎಂದು ಸಿಂಧನೂರು ಸರ್ಕಾರಿ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪುಷ್ಪಾ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ರಸಾಯನಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.

‘Healing the Sky, Saving Ourselves: The Direct Link Between Ozone and Human Health’ ವಿಷಯದ ಕುರಿತು ಮಾತನಾಡಿದ ಡಾ. ಪುಷ್ಪಾ, ಓಜೋನ್ ಪದರವು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ಭೂಮಿಯ ಜೀವಜಗತ್ತನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿದ್ಯಾರ್ಥಿನಿಯರಿಗೆ ವಿವರಿಸಿದರು.

ಅತಿಯಾದ ನೇರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿದ್ದು, ಓಜೋನ್ ಪದರದ ಸವಕಳಿಗೆ ಕಾರಣವಾಗುವ ಹಾನಿಕಾರಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಓಜೋನ್ ರಕ್ಷಣೆ ಭವಿಷ್ಯದ ಪೀಳಿಗೆಯ ಜವಾಬ್ದಾರಿ: ಡಾ. ಸುಗುಣ ಬಸವರಾಜ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಗುಣ ಬಸವರಾಜ ಮಾತನಾಡಿ, ಕಾಲೇಜುಗಳಲ್ಲಿ ಇಂತಹ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಹಾಗೂ ಪರಿಸರ ಜಾಗೃತಿ ಮೂಡಿಸಲು ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಓಜೋನ್ ಪದರವನ್ನು ರಕ್ಷಿಸುವುದು ಕೇವಲ ಪರಿಸರದ ಜವಾಬ್ದಾರಿಯಲ್ಲ. ಅದು ಮಾನವ ಆರೋಗ್ಯ ಮತ್ತು ಭವಿಷ್ಯದ ಪೀಳಿಗೆಯ ಸುರಕ್ಷತೆಯ ಪ್ರಮುಖ ಭಾಗವಾಗಿದೆ ಎಂದು ಅವರು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಜ್ಯೋತಿ ಸಿ.ಕೆ., ಸಹ ಪ್ರಾಧ್ಯಾಪಕಿ, ಭೌತಶಾಸ್ತ್ರ ವಿಭಾಗ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಆಸ್ಮಾ ಅವರು ಸಂಪನ್ಮೂಲ ವ್ಯಕ್ತಿ ಡಾ. ಪುಷ್ಪಾ ಅವರನ್ನು ಪರಿಚಯಿಸಿದರು. ಐಕ್ಯೂಎಸಿ ಸಹ ಸಂಚಾಲಕ ಹಾಗೂ ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಶರಣಗೌಡ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹ ಪ್ರಾಧ್ಯಾಪಕರಾದ ಡಾ. ಸ್ವರೂಪರಾಣಿ, ಡಾ. ಉಮಾದೇವಿ, ಡಾ. ಸೈಯಿದಾ ರಷೀದಾ ಪರ್ವಿನ್, ಶ್ರೀಮತಿ ಸುಮಿತ್ರಾ ಪ್ಯಾಟಿ, ಶ್ರೀ ರಂಗನಾಥ ಬಿಲ್ಲಾರ್, ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷಕುಮಾರ, ಡಾ. ಚನ್ನಬಸವ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಸನ್ನಕುಮಾರ, ಗ್ರಂಥಪಾಲಕ ಡಾ. ಸುರೇಶ ಪಾಟೀಲ್ ಹಾಗೂ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ಬಿ.ಎಸ್‌ಸಿ. ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ಕು. ಆಯೆಷಾ ಅಫಾಫ್ ಕಾರ್ಯಕ್ರಮ ನಿರೂಪಿಸಿದರು. ಕು. ರಷ್ಮಿ ಅತಿಥಿಗಳನ್ನು ಸ್ವಾಗತಿಸಿದರು. ಕು. ಸೌಜನ್ಯ ಪ್ರಾರ್ಥನಾ ಗೀತೆ ಹಾಡಿದರು. ಕು. ಚೈತ್ರಾ ವಂದಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದ ಕಾರ್ಯಕ್ರಮವು ಮಾಹಿತಿ ಸಮೃದ್ಧ ಹಾಗೂ ಪ್ರೇರಣಾದಾಯಕವಾಗಿ ನಡೆಯಿತು.

You Might Also Like

Leave a Reply

Your email address will not be published. Required fields are marked *

Suddi Belaku