ರಾಯಚೂರಿನಲ್ಲಿ ವಿದ್ಯಾರ್ಥಿನಿಯರಿಗೆ ಎಚ್‌ಐವಿ ಏಡ್ಸ್ ಜಾಗೃತಿ ಕಾರ್ಯಕ್ರಮ

Posted by

ಸುದ್ದಿ ಬೆಳಕು ವಾರ್ತೆ

ರಾಯಚೂರು : ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಜಂಟಿಯಾಗಿ ಹೆಚ್ಐವಿ ಏಡ್ಸ್ ಮತ್ತು ಸ್ವಯಂ ಪ್ರೇರಿತ ರಕ್ತದಾನದ ಕುರಿತು ವಿದ್ಯಾರ್ಥಿನಿಯರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ವತಿಯಿಂದ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ – 2026 ರ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸದರಿ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ಸುಗುಣಾ ಬಸವರಾಜ್ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿ ಸಾರ್ವಜನಿಕರ ಆರೋಗ್ಯ ಪಾಲನೆಯ ಹಿತದೃಷ್ಟಿಯಿಂದ ಸರಕಾರವು ಆರೋಗ್ಯ ಇಲಾಖೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಮಾತ್ರವಲ್ಲದೆ ತಪಾಸಣೆ ಹಾಗೂ ಚಿಕಿತ್ಸೆಯ ಸೇವೆಯನ್ನೂ ಒದಗಿಸುತ್ತಿದೆ. ಯುವಾವಸ್ಥೆಯ ವಿದ್ಯಾರ್ಥಿನಿಯರು ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ಹೆಚ್ಐವಿ ಏಡ್ಸ್ ಸೋಂಕಿನ ಸ್ಥಿತಿಗತಿ ತಿಳಿದುಕೊಳ್ಳಲು ಸ್ವಯಂ ಪ್ರೇರಣೆಯಿಂದ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿ ಕೇಳಲಾದ ಮಾಹಿತಿಗೆ ಸರಿಯಾಗಿ ಪ್ರತಿಕ್ರಿಯಿಸುವ ಮೂಲಕ ಜಾಣ ನಡೆಯನ್ನು ಪ್ರದರ್ಶಿಸಬೇಕು ಎಂದು ಕರೆಕೊಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಐಸಿಟಿಸಿ ಆಪ್ತಸಮಾಲೋಚಕಿ ಶ್ರೀಮತಿ ಗಿರಿಜಾ ಪಾಟೀಲ್ ಮಾತನಾಡಿ ಹೆಚ್ಐವಿ ಏಡ್ಸ್ ನ ಇತಿಹಾಸ, ಬೆಳೆವಣಿಗೆ, ಕಾರಣಗಳು, ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ತಪಾಸಣೆ, ಚಿಕಿತ್ಸೆ ಹಾಗೂ ಕಾನೂನಾತ್ಮಕ ರಕ್ಷಣೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವಿಶೇಷವಾಗಿ “ನಿಮ್ಮ ಹೆಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ” ಕ್ರಮದಡಿಯಲ್ಲಿ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿ ಅದರಲ್ಲಿ ಕೇಳಲಾಗುವ ಕೆಲವೇ ಕೆಲವು ಪ್ರಶ್ನೆಗಳಿಗೆ ನೈಜ ಉತ್ತರಗಳನ್ನು ನೀಡುವ ಮೂಲಕ ಸ್ವಯಂ ಹೆಚ್ಐವಿ ಸೋಂಕಿನ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಿರಿ. ಅಪಾಯ ಎನಿಸಿದಲ್ಲಿ ಹತ್ತಿರದ ಅಥವಾ ರಿಮ್ಸ್, ಒಪೆಕ್, ನವೋದಯ ಆಸ್ಪತ್ರೆಗಳಲ್ಲಿರುವ ಐಸಿಟಿಸಿ ಆಪ್ತ ಸಮಾಲೋಚಕರನ್ನು ಭೇಟಿ ಮಾಡಬಹುದು. ಸಮಾಲೋಚನೆಯ ಮಾಹಿತಿಗಳು ಅತ್ಯಂತ ಗೌಪ್ಯವಾಗಿರುತ್ತವೆ ಮತ್ತು ವ್ಯಕ್ತಿ ಗೌರವಕ್ಕೆ ಚ್ಯುತಿ ಬಾರದಂತೆ ಮುಂದಿನ ಪ್ರಕ್ರಿಯೆಗಳು ಜರುಗುತ್ತವೆ. ಹಾಗಾಗಿ ಎಲ್ಲ ಯುವಕ ಯುವತಿಯರು ಸದರಿ ಪ್ರಶ್ನಾವಳಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿನಿಯರಿಂದ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿಸಿ ಪ್ರತಿಕ್ರಿಯಿಸುವಂತೆ ಪ್ರೇರೇಪಿಸಿದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್ಐವಿ ಏಡ್ಸ್ ಮತ್ತು ಸ್ವಯಂ ಪ್ರೇರಿತ ರಕ್ತದಾನದ ಕುರಿತಾದ ಕಾರ್ಯಕ್ರಮದ ಹಿನ್ನೆಲೆ ಮಾಹಿತಿ ನೀಡಿದರು.
ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ ಕೆ, ಶ್ರೀ ಶರಣಗೌಡ, ಡಾ. ಉಮಾದೇವಿ, ಶ್ರೀಮತಿ ಸುಮಿತ್ರಾ ಪ್ಯಾಟಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವಯಂ ಸೇವಕಿಯರಾದ ಸುಷ್ಮಾ, ರೇಖಾ, ಅನ್ನಪೂರ್ಣ, ಮಹೇಶ್ವರಿ, ಸಂಗೀತಾ ವಿ, ಅಂಬುಜಾ, ಸುವರ್ಣಾ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku