
ಸುದ್ದಿ ಬೆಳಕು ವಾರ್ತೆ
ರಾಯಚೂರು :ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ಆಶ್ರಯದಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗಾಗಿ ಓರಿಯೆಂಟೇಷನ್ (ಶೈಕ್ಷಣಿಕ ದಿಕ್ಸೂಚಿ) ಕಾರ್ಯಕ್ರಮವನ್ನು ಶನಿವಾರ ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಗಣ್ಯರು ಹಸಿರು ಚಾಲನೆ ನೀಡಿದರು. ಸಮಾರಂಭದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಹಾಗೂ ಬಿಸಿಎ ವಿಭಾಗಗಳಿಗೆ ಹೊಸದಾಗಿ ಸೇರ್ಪಡೆಯಾದ ನೂರಾರು ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ಅವರು, “ಪದವಿ ಶಿಕ್ಷಣವು ವಿದ್ಯಾರ್ಥಿನಿಯರ ಬದುಕಿಗೆ ಅತ್ಯಂತ ಮಹತ್ವದ ತಿರುವು ನೀಡುವ ಘಟ್ಟವಾಗಿದೆ. ಕಾಲೇಜಿನಲ್ಲಿ ಕೇವಲ ಪಠ್ಯ ಬೋಧನೆಗಷ್ಟೇ ಸೀಮಿತವಾಗದೆ ವ್ಯಕ್ತಿತ್ವ ವಿಕಸನ, ಕ್ರೀಡೆ, ಸಾಂಸ್ಕೃತಿಕ ಹಾಗೂ ಕೌಶಲ್ಯಾಭಿವೃದ್ಧಿಗೆ ಪೂರಕವಾದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿನಿಯರು ಪ್ರತಿಯೊಂದು ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಸಿಗುವ ಸುವರ್ಣಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಶಿಸ್ತು ಹಾಗೂ ನಿರಂತರ ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಂಡು ಉನ್ನತ ಗುರಿ ತಲುಪಬೇಕು,” ಎಂದು ಕರೆ ನೀಡಿದರು.
ವೇದಿಕೆಯಲ್ಲಿದ್ದ ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು ತಮ್ಮ ತಮ್ಮ ಪಠ್ಯವಿಷಯಗಳು, ಪರೀಕ್ಷಾ ಪದ್ಧತಿ, ಭವಿಷ್ಯದ ಉದ್ಯೋಗಾವಕಾಶಗಳ ಕುರಿತು ನೂತನ ವಿದ್ಯಾರ್ಥಿನಿಯರಿಗೆ ವಿಸ್ತೃತ ಮಾಹಿತಿ ನೀಡಿದರು. ಜತೆಗೆ, ಕಾಲೇಜಿನ ವಿವಿಧ ಶೈಕ್ಷಣಿಕ ಮತ್ತು ಕ್ರೀಡಾ ಘಟಕಗಳ ಸಂಯೋಜಕರು ತಮ್ಮ ತಮ್ಮ ವಿಭಾಗಗಳ ಕಾರ್ಯವೈಖರಿ, ಸೌಲಭ್ಯಗಳು ಹಾಗೂ ವಿದ್ಯಾರ್ಥಿನಿಯರ ಜವಾಬ್ದಾರಿಗಳ ಕುರಿತು ಸಮಗ್ರ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಜ್ಯೋತಿ ಸಿ.ಕೆ., ಸಹ ಸಂಚಾಲಕರಾದ ಶರಣಗೌಡ ಕೆ., ಸಹ ಪ್ರಾಧ್ಯಾಪಕರಾದ ಡಾ. ಸೈಯಿದಾ ರಷೀದಾ ಪರ್ವೀನ್, ಡಾ. ಸ್ವರೂಪರಾಣಿ, ಡಾ. ಉಮಾದೇವಿ, ಶ್ರೀಮತಿ ಸುಮಿತ್ರಾ ಪ್ಯಾಟಿ, ರಂಗನಾಥ ಬಿಲ್ಲಾರ್, ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷಕುಮಾರ, ಶ್ರೀಮತಿ ಸರಸ್ವತಿ, ಡಾ. ಆಸ್ಮಾ, ಡಾ. ಚನ್ನಬಸವ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಸನ್ನಕುಮಾರ, ಗ್ರಂಥಪಾಲಕರಾದ ಡಾ. ಸುರೇಶ ಪಾಟೀಲ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿನಿಯರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.












Leave a Reply