ರಾಹುಲ್ ಗಾಂಧಿ ಹುಟ್ಟು ಹೋರಾಟಗಾರ, ಕೇಸ್‌ಗಳಿಗೆ ಹೆದರಲ್ಲ: ಸಿಎಂ ಡಿಕೆಶಿ

Posted by

–

ಸುದ್ದಿ ಬೆಳಕು ವಾರ್ತೆ

ಬೆಂಗಳೂರು  : “ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹುಟ್ಟು ಹೋರಾಟಗಾರ. ಹೋರಾಟಗಾರನಾಗಿಯೇ ಬದುಕುತ್ತಿರುವ ಅವರು ಹೋರಾಟಗಾರನಾಗಿಯೇ ಸಾಯುತ್ತಾರೆ. ಅವರ ವಿರುದ್ಧ ಇಂತಹ ನೂರು ಸುಳ್ಳು ಮೊಕದ್ದಮೆಗಳನ್ನು ಹೂಡಿದರೂ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಎಂದಿಗೂ ಹೆದರುವುದಿಲ್ಲ. ರಾಹುಲ್ ಗಾಂಧಿ ಅವರು ಬೇರೆಯವರಂತೆ ಮುಚ್ಚಳಿಕೆ ಪತ್ರ ಬರೆದುಕೊಡುವವರಲ್ಲ, ಕ್ಷಮೆ ಕೇಳುವವರೂ ಅಲ್ಲ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡದಲ್ಲಿ ದುರುದ್ದೇಶಪೂರಿತವಾಗಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಜವಾಬ್ದಾರಿ. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ಗಾಂಧಿ ಕುಟುಂಬ ದೇಶದ ಸಮಗ್ರತೆ ಮತ್ತು ಶಾಂತಿಗಾಗಿ ಪ್ರಾಣವನ್ನೇ ಬಲಿದಾನ ಮಾಡಿದೆ. ದೇಶದ ಸ್ವಾತಂತ್ರ್ಯ ಚಳವಳಿ ಹಾಗೂ ಇತಿಹಾಸದಲ್ಲಿ ಬಿಜೆಪಿಯ ಯಾವ ನಾಯಕರಾದರೂ ಭಾಗಿಯಾಗಿದ್ದಾರೆಯೇ?” ಎಂದು ಪ್ರಶ್ನಿಸಿದರು.

ಉತ್ತರಾಖಂಡದಲ್ಲಿ ಬಿಜೆಪಿಗೆ ಸೋಲಿನ ಭೀತಿ:

“ಉತ್ತರಾಖಂಡದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಸೋಲಿನ ಹತಾಶೆಯಿಂದ ವಿಷಯಾಂತರ ಮಾಡಲು ಇಂತಹ ಷಡ್ಯಂತ್ರ ರೂಪಿಸಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶ ನಡೆಸಿದ ಜಾಗವನ್ನು ಬಿಜೆಪಿಯವರು ಗಂಜಲ ಹಾಕಿ ಶುದ್ಧೀಕರಣ ಮಾಡಿದ್ದು ಇಡೀ ದೇಶದ ಸಾಮಾಜಿಕ ಸಾಮರಸ್ಯಕ್ಕೆ ಮಾಡಿದ ಅಪಮಾನ. ಈ ಕೃತ್ಯಕ್ಕಾಗಿ ಬಿಜೆಪಿ ದೇಶದ ಜನತೆಯ ಕ್ಷಮೆಯಾಚಿಸಬೇಕು,” ಎಂದು ಆಕ್ರೋಶ ಹೊರಹಾಕಿದರು.

ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ಪ್ರತಿಯಾತ್ರೆ:

ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯನ್ನು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ಕರೆದ ಮುಖ್ಯಮಂತ್ರಿಗಳು, “ಬಿಜೆಪಿ ತನ್ನ ಆಡಳಿತಾವಧಿಯ ಅನ್ಯಾಯ ಹಾಗೂ ಪಾಪಗಳನ್ನು ಮುಚ್ಚಿಕೊಳ್ಳಲು ಪಾದಯಾತ್ರೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ಯಾತ್ರೆ ಕೈಗೊಳ್ಳಲಿದ್ದು, ನಾವು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ, ಜನತೆಯ ಮುಂದೆ ತಕ್ಕ ಉತ್ತರ ನೀಡಲಿದ್ದೇವೆ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ನೋಡಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

↑
Suddi Belaku