
ದೇವದುರ್ಗ : 21ನೇ ಶತಮಾನದ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪಡೆದ ಪ್ರತಿಯೊಬ್ಬರಿಗೂ ಸರ್ಕಾರದಿಂದ ಉದ್ಯೋಗ ಕಲ್ಪಿಸುವುದು ಸಾಧ್ಯವಿಲ್ಲ. ಹೀಗಾಗಿ ಔಪಚಾರಿಕ ಶಿಕ್ಷಣದ ಜತೆಗೆ ವೃತ್ತಿಪರ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಪಡೆಯುವುದು ಇಂದಿನ ಯುವಪೀಳಿಗೆಗೆ ಅತ್ಯವಶ್ಯಕವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿ ಡಿ. ರಾಜಕುಮಾರ್ ಹೇಳಿದರು.
ಪಟ್ಟಣದ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಜನ ಶಿಕ್ಷಣ ಸಂಸ್ಥಾನ, ಬುಡಕಟ್ಟು ಕೌಶಲ್ಯ ಕೇಂದ್ರ, ರಾಯಚೂರು ವತಿಯಿಂದ ಆ. 5ರಂದು ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದ ಜತೆಗೆ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಕಲಿತುಕೊಂಡರೆ ಭವಿಷ್ಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆ. ಯುವಜನರು ತಮ್ಮ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಅವರು ಸಲಹೆ ನೀಡಿದರು.
ಸ್ವಯಂ ಉದ್ಯೋಗಕ್ಕೆ ಕೌಶಲ್ಯ ತರಬೇತಿ ನೆರವು
ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಹಾಗೂ ಬುಡಕಟ್ಟು ಕೌಶಲ್ಯ ಕೇಂದ್ರ, ರಾಯಚೂರಿನ ನಿರ್ದೇಶಕ ಸದಾನಂದ ಪೂಜಾರಿ ಮಾತನಾಡಿ, ಇಂದಿನ ಯುವಜನತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನ, ಸಲಹೆ ಹಾಗೂ ವೃತ್ತಿಪರ ತರಬೇತಿ ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವುದು ಅಗತ್ಯವಾಗಿದೆ ಎಂದರು.
ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯಗಳ ಸಂಯುಕ್ತ ಆಶ್ರಯದಲ್ಲಿ ಬುಡಕಟ್ಟು ಕೌಶಲ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ರಾಯಚೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಈ ಭಾಗದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಪೂರ್ಣಗೊಂಡ ಬಳಿಕ ಉದ್ಯೋಗಕ್ಕಾಗಿ ಪರದಾಡುವ ಬದಲು ತರಬೇತಿಯ ಮೂಲಕ ಸ್ವಯಂ ಉದ್ಯೋಗ ಆರಂಭಿಸಿ ಉದ್ಯೋಗದಾತರಾಗುವ ಅವಕಾಶವಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಒಂಬತ್ತು ವಿಭಾಗಗಳಲ್ಲಿ ತರಬೇತಿ
ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅವುಗಳಲ್ಲಿ ದರ್ಜಿಯ ಸುಧಾರಿತ ತರಬೇತಿ, ಮೊಬೈಲ್ ರಿಪೇರಿ ಮತ್ತು ನಿರ್ವಹಣೆ, ಕಂಪ್ಯೂಟರ್ ಟೆಕ್ನಿಷಿಯನ್, ಸಹಾಯಕ ಕಂಪ್ಯೂಟರ್ ಆಪರೇಟರ್, ಎಲೆಕ್ಟ್ರಿಕಲ್ ಟೆಕ್ನಿಷಿಯನ್, ಸಹಾಯಕ ವೈರ್‌ಮ್ಯಾನ್, ಸಾಂಪ್ರದಾಯಿಕ ಕೈ ಕಸೂತಿ, ಬ್ಯೂಟಿ ಕೇರ್ ಹಾಗೂ ಜೇನುನೊಣ ಸಾಕಾಣಿಕೆ ಮತ್ತು ಜೇನು ಕೃಷಿ ತರಬೇತಿಗಳು ಸೇರಿವೆ.
ಇದರ ಜತೆಗೆ ಇನ್ನೂ ಹಲವು ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಸದಾನಂದ ಪೂಜಾರಿ ಕರೆ ನೀಡಿದರು.
ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಓದಿಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಬೆಳ್ಳಿಯಪ್ಪ ಬಲ್ಲಿದವ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಪಿಸಿಕೊಳ್ಳಬೇಕು. ಮೊಬೈಲ್ ಗೀಳಿನಿಂದ ಹೊರಬಂದು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಧಕರ ಜೀವನ ಹಾಗೂ ಸಾಧನೆಯ ಹಾದಿಯನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಅನಗತ್ಯವಾಗಿ ರಾಜಕೀಯ ವ್ಯಕ್ತಿಗಳ ಹಿಂದೆ, ಸಂಘಟನೆಗಳ ಹಿಂದೆ ತಿರುಗಾಡಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಅನ್ಯಾಯ ಅಥವಾ ಸಮಸ್ಯೆ ಎದುರಾದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವದಂತೆ ಪ್ರತಿಯೊಬ್ಬರೂ ಕಾಯಕಕ್ಕೆ ಆದ್ಯತೆ ನೀಡಬೇಕು. ಅದಕ್ಕಾಗಿ ಸರ್ಕಾರ ಒದಗಿಸುವ ಇಂತಹ ಕೌಶಲ್ಯ ತರಬೇತಿಗಳ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಉನ್ನತ ಮಟ್ಟದ ಕನಸುಗಳನ್ನು ಕಂಡು, ಅವುಗಳನ್ನು ನನಸು ಮಾಡಿಕೊಳ್ಳಲು ನಿರಂತರ ಪರಿಶ್ರಮ ಹಾಗೂ ಅಧ್ಯಯನದಲ್ಲಿ ತೊಡಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವದುರ್ಗ ಐಟಿಐ ಕಾಲೇಜಿನ ಪ್ರಾಂಶುಪಾಲ ಚಂದ್ರಬಾಬು, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ವಸತಿ ನಿಲಯದ ಮೇಲ್ವಿಚಾರಕ ದತ್ತಪ್ಪ ಮಾತನಾಡಿದರು. ಸಿಒ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ವಿಶ್ವನಾಥ ಕೋಟೆ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು.











Leave a Reply