ಭೀಮರಾಯನಗುಡಿ ಕೃಷಿ ವಿದ್ಯಾರ್ಥಿಗಳಿಂದ ಭತ್ತ ನಾಟಿ ಪ್ರಾಯೋಗಿಕ ತರಬೇತಿ

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ : ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ (RAWE – Rural Agricultural Work Experience) ಭಾಗವಾಗಿ, ಮಲ್ಲನಗೌಡರ ಹೊಲದಲ್ಲಿ ಇತ್ತೀಚೆಗೆ ಭತ್ತ ನಾಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

​ಕಾರ್ಯಕ್ರಮದಲ್ಲಿ ‘ರಾವೆ’ ಯೋಜನೆಯ ಕೃಷಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಹೊಲದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಭತ್ತ ನಾಟಿಯ ವೈಜ್ಞಾನಿಕ ವಿಧಾನಗಳು, ಸಸಿಗಳ ನಡುವೆ ಇಡಬೇಕಾದ ಸೂಕ್ತ ಅಂತರ, ನಾಟಿಯ ಆಳ ಹಾಗೂ ಒಂದು ಕುಣಿಗೆ ಇಡಬೇಕಾದ ಸರಿಯಾದ ಸಸಿಗಳ ಸಂಖ್ಯೆಯ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು. ರೈತರೊಂದಿಗೆ ನೇರವಾಗಿ ಗದ್ದೆಗೆ ಇಳಿದು ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳು ಭತ್ತ ಬೆಳೆ ನಿರ್ವಹಣೆಯ ಪ್ರತ್ಯಕ್ಷ ಅನುಭವವನ್ನು ಪಡೆದುಕೊಂಡರು.

​ತರಗತಿಯಲ್ಲಿ ಕಲಿತ ಸೈದ್ಧಾಂತಿಕ ಕೃಷಿ ಜ್ಞಾನವನ್ನು ನೈಜ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳಲು ಹಾಗೂ ಅನ್ನದಾತರೊಂದಿಗೆ ಉತ್ತಮ ಸಂವಹನ ಮತ್ತು ಬಾಂಧವ್ಯ ಬೆಳೆಸಿಕೊಳ್ಳಲು ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಅತ್ಯಂತ ಪೂರಕವಾಗಿತ್ತು.

​ಈ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಅಮರೇಗೌಡ ಅವರ ನೇತೃತ್ವದಲ್ಲಿ ಹಾಗೂ ರಾವೆ ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ಯಾಮರಾವ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು.

​ಇದೇ ಸಂದರ್ಭದಲ್ಲಿ ಆಗಮಿಸಿದ್ದ ಊರಿನ ಪ್ರಮುಖರಾದ ಬಸವರಾಜ್ ಸಾಹುಕಾರ್ ಸೊನ್ನಾದ್, ಮಲ್ಲುಗೌಡ ಪೊಲೀಸ್ ಪಾಟೀಲ್, ಸತೀಶ್ ಮುತ್ತಾಜರ್, ಶರಣು ಎಸ್. ಇಟಗಿ, ಮಲ್ಲು ಹೇರೂಂಡಿ ಹಾಗೂ ಮಲ್ಲು ಜಡಿ ಅವರು ಕೃಷಿ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿ, ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *

Suddi Belaku