ಪರಿಷ್ಕೃತ ಕನಿಷ್ಠ ವೇತನ ತಡೆಗೆ ಎಐಯುಟಿಯುಸಿ ವಿರೋಧ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮೇ 22, 2026ರಿಂದ ರಾಜ್ಯಾದ್ಯಂತ ಜಾರಿಗೆ ಬಂದಿರುವ ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಅಮಾನತಿನಲ್ಲಿಡುವ ಯಾವುದೇ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತಕ್ಷಣವೇ ತಿರಸ್ಕರಿಸಬೇಕು ಹಾಗೂ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಪರಿಷ್ಕೃತ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ‘ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್’ (ಎಐಯುಟಿಯುಸಿ) ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳ ಹೊರಗುತ್ತಿಗೆ ಸಿಬ್ಬಂದಿ, ಆರೋಗ್ಯ, ಶಿಕ್ಷಣ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಖಾಸಗಿ ಕಂಪನಿಗಳ ನೂರಾರು ಹೊರಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು.

ಕಾರ್ಮಿಕರ ಹಕ್ಕು ಕಸಿಯುವುದು ಕಾನೂನುಬಾಹಿರ:

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್, “2022ರಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆಯು ನಾಲ್ಕು ವರ್ಷಗಳ ವಿಳಂಬದ ನಂತರ ಮೇ 2026ರಲ್ಲಿ ಜಾರಿಗೆ ಬಂದಿದೆ. ಹಲವಾರು ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳು ಈಗಾಗಲೇ ಪರಿಷ್ಕೃತ ವೇತನ ಪಾವತಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹಣಕಾಸು ಇಲಾಖೆಯು ಅಧಿಸೂಚನೆಯನ್ನು ಅಮಾನತಿನಲ್ಲಿಡುವ ಪ್ರಸ್ತಾವನೆ ತಂದಿರುವುದು ಮತ್ತು ವೇತನ ತಡೆಹಿಡಿದಿರುವುದು ಕಾರ್ಮಿಕ ವಿರೋಧಿ ಹಾಗೂ ಸಂವಿಧಾನ ವಿರೋಧಿ ಕ್ರಮವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕನಿಷ್ಠ ವೇತನ ಕಾಯ್ದೆ 1948ರ ಪ್ರಕಾರ ಅಂತಿಮ ಅಧಿಸೂಚನೆ ಹೊರಬಿದ್ದ ಮೇಲೆ ಅದನ್ನು ಅಮಾನತಿನಲ್ಲಿಡುವ ಅಧಿಕಾರ ಯಾವುದೇ ಸರ್ಕಾರಕ್ಕೆ ಇಲ್ಲ. ಉಚ್ಚ ನ್ಯಾಯಾಲಯವೂ ಮಾಲೀಕರ ಸಂಘಗಳ ತಡೆಯಾಜ್ಞೆ ಅರ್ಜಿಯನ್ನು ನಿರಾಕರಿಸಿದೆ. ಹೌಸ್‌ಕೀಪಿಂಗ್, ಭದ್ರತಾ ಸೇವೆ, ಕಟ್ಟಡ ನಿರ್ಮಾಣ ಮುಂತಾದ ಸ್ಥಳಾಧಾರಿತ ಸೇವೆಗಳು ಬೇರೆ ರಾಜ್ಯಗಳಿಗೆ ವರ್ಗಾವಣೆಯಾಗುತ್ತವೆ ಎಂಬ ವಾದ ಆಧಾರರಹಿತವಾಗಿದೆ. ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕನಿಷ್ಠ ವೇತನ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ಪಷ್ಟಪಡಿಸಿವೆ,” ಎಂದು ಅವರು ವಿವರಿಸಿದರು.

ಉಗ್ರ ಹೋರಾಟದ ಎಚ್ಚರಿಕೆ:

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ, “ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಳೆಯ ವೇತನದಲ್ಲಿ ಜೀವನ ನಡೆಸುವುದು ದುಸ್ಸಾಧ್ಯವಾಗಿದೆ. ಕೊಟ್ಟಂತೆ ಮಾಡಿ ಮತ್ತೆ ಕಿತ್ತುಕೊಳ್ಳುವ ಸರ್ಕಾರದ ನಡೆ ಖಂಡನೀಯ. ಪರಿಷ್ಕೃತ ವೇತನ ತಡೆಯುವ ಯತ್ನ ಕೈಬಿಟ್ಟು ಬಾಕಿ ವೇತನವನ್ನು ಕೂಡಲೇ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು,” ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಕಾರ್ಮಿಕರ ಬೇಡಿಕೆಗಳನ್ನು ತಕ್ಷಣವೇ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ, ಮುಖಂಡರಾದ ಶರಣಪ್ಪ, ತಾಜುದ್ದೀನ, ಭೀಮಾಶಂಕರ, ಶ್ರೀಕಾಂತ್, ಮರಳಮ್ಮ, ನಾಗಮ್ಮ, ಯಲ್ಲಮ್ಮ, ಭೀಮಬಾಯಿ, ನಾರಾಯಣ, ಗಜಾನನ, ಬಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku