ಮಕ್ಕಳ ಹಕ್ಕುಗಳ ಸಂರಕ್ಷಣೆ ಸಮಾಜದ ಹೊಣೆ: ಶಹಾಪುರದಲ್ಲಿ ಜಾಗೃತಿ ಕಾರ್ಯಕ್ರಮ

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ: ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಆದೇಶದಂತೆ, ಶಹಾಪುರ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಶ್ರೀ ದೇವಪ್ಪ ಗಿರಿಗಿರಿ ಅವರು ಮಕ್ಕಳ ಮೂಲಭೂತ ಹಕ್ಕುಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪ್ರತಿಯೊಬ್ಬ ಮಗುವಿಗೂ ಬದುಕುವ ಹಕ್ಕು, ರಕ್ಷಣೆ ಪಡೆಯುವ ಹಕ್ಕು, ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳಿದ್ದು, ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.

ಅಲ್ಲದೆ, ಪೋಕ್ಸೋ ಕಾಯ್ದೆ–2012 ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ರೂಪಿಸಲಾಗಿರುವ ಕಾನೂನು ಹಾಗೂ ಅದರ ಮಹತ್ವವನ್ನು ವಿವರಿಸಿದರು.

ಇದೇ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಾದ ಶ್ರೀ ತ್ರಿಶೂಲ ಎನ್. ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ–2006 (ತಿದ್ದುಪಡಿ–2016) ಕುರಿತು ಮಾಹಿತಿ ನೀಡಿ, ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಜೊತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳು ಮತ್ತು ಮಕ್ಕಳಿಗೆ ಲಭ್ಯವಿರುವ ನೆರವುಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಶ್ರೀ ಹನುಮಂತ ಬಿ. ಮಾತನಾಡಿ, ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸುರಕ್ಷಿತ ಹಾಗೂ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Suddi Belaku