ರೈತರಿಗೆ ನ್ಯಾಯ ಕೊಡಿಸುವಂತಹ ಹೋರಾಟ ನಿಮ್ಮ ಸಂಘಟನೆಯಿಂದ ಮಾಡಿ : ಮುದ್ನಾಳ

Posted by

ಯಾದಗಿರಿ: ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿರುವ ರೈತರಿಗೆ ಮಳೆ ಕೈಕೊಟ್ಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂತಹ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಚಾಟಿ ಬೀಸುವಂತಹ ಹೋರಾಟ ರೂಪಿಸಿ, ರೈತರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಳೆಯನ್ನೇ ನಂಬಿಕೊಂಡು ಸಾಲ ಮಾಡಿ ಬೀಜ ಬಿತ್ತನೆ ಮಾಡಿರುವ ರೈತರಿಗೆ ಮಳೆ ಕೈಕೊಟ್ಟಿರುವುದರಿಂದ ರೈತರ ಬದುಕು ದುಸ್ತರವಾಗಿದೆ ಎಂದರು.

ರೈತರ ಸಂಕಷ್ಟದ ಸಂದರ್ಭದಲ್ಲಿ ಸಂಘಟನೆಗಳು ಕೇವಲ ಮನವಿ ಸಲ್ಲಿಸುವುದಕ್ಕೆ ಸೀಮಿತವಾಗದೆ, ಸರ್ಕಾರದ ಗಮನ ಸೆಳೆಯುವಂತಹ ಹೋರಾಟಗಳನ್ನು ರೂಪಿಸಬೇಕು. ರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿ, ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ನೆರವು ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಪೋಲಪ್ಪ ಎಂ ನಾರಾಯಣ್ಣೋರ್, ಉಪಾಧ್ಯಕ್ಷ ಮಸ್ತೆಪ್ಪ ಬಬಲಾದ, ಯಾದಗಿರಿ ತಾಲೂಕ ಅಧ್ಯಕ್ಷ ಭೀಮರಾಯ ಬಾವುರ್,  ವಡಗೇರಾ ತಾಲೂಕ ಅಧ್ಯಕ್ಷ ಕಾಡಪ್ಪ ಹೂಗಾರ ಕುಮನೂರು, ಚಂದ್ರು ಗೌಡ, ಸಾಬಣ್ಣ ಸಿದ್ಧಣ್ಣೋರ್,
ಮಲ್ಲಿಕಾರ್ಜುನ ಮುಷ್ಕರ, ಲಕ್ಷ್ಮಣ ಹಡಪದ್,
ಅನಿಲ್ ಕುಮಾರ್ ಬೋಂಬಾಯಿ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

Suddi Belaku