ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರಿಗೆ ಆದ್ಯತೆ: ಅಧಿಕಾರಿಗಳಿಗೆ ಶಾಸಕ ತುನ್ನೂರ ಖಡಕ್ ಸೂಚನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮಳೆಗಾಲ ಆರಂಭಗೊಂಡಿದ್ದರಿಂದ ಮತಕ್ಷೇತ್ರದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಡಗೇರಾ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳ ನೂರಾರು ಹಳ್ಳಿ ಮತ್ತು ತಾಂಡಾಗಳು ತಮ್ಮ ಮತ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತಿದ್ದು, ಬೊರವೆಲ್‌ಗಳ ಸ್ಥಿತಿಗತಿಗಳ ಮತ್ತು ದುರಸ್ತಿ, ಆರ್‌ಒ ಪ್ಲಾಂಟ್‌ಗಳ ರಿಪೇರಿಗಳಿದ್ದರೇ ಹೊಸ ಬೊರವೆಲ್ ಬೇಕಾಗಿದ್ದರೇ ಮತ್ತು ಖಾಸಗಿ ಬೊರವೆಲ್ ಮೂಲಕ ಪಡೆಯುವುದು ಸೇರಿದಂತೆಯೇ ಏನೆಲ್ಲ ಅಗತ್ಯವಿದೆಯೋ ಅದೆಲ್ಲವೂ ಕೈಗೊಳ್ಳಬೇಕೆಂದರು. ಕುಡಿಯುವ ನೀರಿಗಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಅಂದಾಜು ವೆಚ್ಚ ಸಿದ್ದಪಡಿಸಿ, ಕೂಡಲೇ ಆ ಕೆಲಸಗಳಿಗೆ ಅನುದಾನ ನೀಡುವುದಾಗಿ ಶಾಸಕರು ಹೇಳಿದರು.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ಪಿಡಿಒಗಳು ಇದ್ದು, ಗ್ರಾಮದ ಸ್ವಚ್ಛತೆ ಕೆಲಸ ಮಾಡಿಸಬೇಕು. ಮಳೆ ಆರಂಭವಾಗುತ್ತಲ್ಲೇ ಸಾಂಕ್ರಾಮಿಕ ರೊಗಗಳ ಭೀತಿ ಹೆಚ್ಚಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಚರಂಡಿ ಶುಚಿಗೊಳಿಸಬೇಕು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಪಿಡಿಒಗಳಿಗೆ ಸೂಚನೆ ನೀಡಬೇಕೆಂದು ಶಾಸಕ ಶುನ್ನೂರ ಹೇಳಿದರು. ನಗರದ 31 ವಾರ್ಡಗಳಲ್ಲೂ ಶುದ್ದ ಕುಡಿಯುವ ನೀರು ಸರಬರಾಜಿಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಅನೇಕ ಕಡೆ ಇರುವ ಮುಖ್ಯ ರಸ್ತೆಗಳಲ್ಲಿ ತಗ್ಗುಗಳು ಬಿದ್ದಿದ್ದು. ಮಳೆ ನೀರು ನಿಂತರೇ ಜನರ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದಕ್ಕೆ ತಗ್ಗು ಮುಚ್ಚುವ ಕೆಲಸ ಮಾಡಿ, ಚರಂಡಿಗಳು ನಿತ್ಯವೂ ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಿ ಎಂದು ಶಾಸಕರು ಹೇಳಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರ, ಯಾದಗಿರಿ ತಹಸಿಲ್ದಾರ ಸುರೇಶ ಅಂಕಲಗಿ, ವಡಗೇರಾ ತಹಸಿಲ್ದಾರ ಮಂಗಳಾ, ಶಹಾಪುರ ತಾಪಂ ಅಧಿಕಾರಿ ಬಸವರಾಜ ಶರಬೈ, ಯಾದಗಿರಿ ತಾಪಂ ಇಒ ಮಹಾದೇವ, ವಡಗೇರಾ ತಾಪಂ ಅಧಿಕಾರಿ ಶಶಿಧರ ಹಿರೇಮಠ, ಜೆಸ್ಕಾಂ ಎಇಇ ಮಾರ್ಕಂಡೇಶ್ವರ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಇತರ ಅಧಿಕಾರಿಗಳು ಇದ್ದರು

Leave a Reply

Your email address will not be published. Required fields are marked *

Suddi Belaku