
ಸುದ್ದಿ ಬೆಳಕು ವಾರ್ತೆ
ಗ್ಲಾಸ್ಗೋದಲ್ಲಿ ಮುಕ್ತಾಯಗೊಂಡ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳೊಂದಿಗೆ ಒಟ್ಟು 39 ಪದಕಗಳನ್ನು ಮುಡಿಗೇರಿಸಿಕೊಂಡು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್ ಮತ್ತು ಹಾಕಿಯಂತಹ ಪ್ರಮುಖ ಕ್ರೀಡೆಗಳು ಈ ಬಾರಿಯ ಕೂಟದಲ್ಲಿ ಇಲ್ಲದಿದ್ದರೂ, ಭಾರತೀಯ ಕ್ರೀಡಾಪಟುಗಳು ಬಾಕ್ಸಿಂಗ್, ಅಥ್ಲೆಟಿಕ್ಸ್, ವೇಟ್ಲಿಫ್ಟಿಂಗ್ ಮತ್ತು ಜೂಡೋದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು 171 ಪದಕಗಳೊಂದಿಗೆ ಆಸ್ಟ್ರೇಲಿಯಾ ಪ್ರಥಮ, ಇಂಗ್ಲೆಂಡ್ (110) ದ್ವಿತೀಯ ಹಾಗೂ ಕೆನಡಾ (62) ತೃತೀಯ ಸ್ಥಾನ ಪಡೆದುಕೊಂಡಿವೆ. ಆತಿಥೇಯ ಸ್ಕಾಟ್ಲೆಂಡ್ ದೇಶವನ್ನು (39 ಪದಕ) ಹೆಚ್ಚು ಬೆಳ್ಳಿ ಪದಕಗಳ ಆಧಾರದ ಮೇಲೆ ಹಿಂದಿಕ್ಕಿರುವ ಭಾರತ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಬಾಕ್ಸಿಂಗ್ನಲ್ಲಿ ಇತಿಹಾಸ:
ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಪ್ರಾಬಲ್ಯ ಎದ್ದು ಕಾಣುತ್ತಿದ್ದು, ಬರೋಬ್ಬರಿ 7 ಚಿನ್ನ ಮತ್ತು 3 ಬೆಳ್ಳಿ ಸೇರಿ ಒಟ್ಟು 10 ಪದಕಗಳು ಲಭಿಸಿವೆ. ಮಹಿಳಾ ವಿಭಾಗದಲ್ಲಿ ಪ್ರೀತಿ ಪವಾರ್, ಜಾಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ, ಪ್ರಿಯಾ ಘಂಗಸ್ ಮತ್ತು ಅರುಂಧತಿ ಚೌಧರಿ ಚಿನ್ನ ಗೆದ್ದರೆ, ಪುರುಷರ ವಿಭಾಗದಲ್ಲಿ ಸಚಿನ್ ಸಿವಾಚ್ ಹಾಗೂ ಅಂಕುಶ್ ಪಂಘಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ವೇಟ್ಲಿಫ್ಟಿಂಗ್ ಮತ್ತು ಜೂಡೋ ಕಮಾಲ್:
ವೇಟ್ಲಿಫ್ಟಿಂಗ್ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು 48 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಕಾಮನ್ವೆಲ್ತ್ನಲ್ಲಿ ಸತತ ಮೂರನೇ ಬಾರಿಗೆ ಚಿನ್ನ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೇಟ್ಲಿಫ್ಟಿಂಗ್ನಿಂದ 1 ಚಿನ್ನ, 6 ಬೆಳ್ಳಿ ಹಾಗೂ 1 ಕಂಚು ಸೇರಿ ಒಟ್ಟು 8 ಪದಕಗಳು ಒಲಿದಿವೆ. ಜೂಡೋದಲ್ಲಿ ಅಸ್ಮಿತಾ ಡೇ ಮತ್ತು ಹರ್ಷ ಸಿಂಗ್ ಚಿನ್ನ ಗೆದ್ದಿದ್ದಾರೆ.
ಅಥ್ಲೆಟಿಕ್ಸ್ನಲ್ಲಿ ಮಿಂಚಿದ ತಾರೆಗಳು:
ಅಥ್ಲೆಟಿಕ್ಸ್ ಮತ್ತು ಪ್ಯಾರಾ-ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಒಟ್ಟಾರೆ 16 ಪದಕಗಳನ್ನು ಗೆದ್ದಿದೆ. ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ (85.83 ಮೀಟರ್) ಬೆಳ್ಳಿ ಪದಕ ಗೆದ್ದರೆ, ಓಟಗಾರ ಗುಲ್ವೀರ್ ಸಿಂಗ್ 10,000 ಮೀಟರ್ ಓಟದಲ್ಲಿ ಬೆಳ್ಳಿ ಹಾಗೂ 5,000 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದು ಒಂದೇ ಕಾಮನ್ವೆಲ್ತ್ನಲ್ಲಿ 2 ಅಥ್ಲೆಟಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಶರ್ಮಿಳಾ ಧನಕರ್, ದಿಲೀಪ್ ಗಾವಿತ್ ಮತ್ತು ಸೋಮನ್ ರಾಣಾ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಸೀಮಿತ ಕ್ರೀಡೆಗಳಿದ್ದರೂ, ಕ್ರೀಡಾಪಟುಗಳು ತೋರಿದ ಈ ಅಪ್ರತಿಮ ಸಾಧನೆ ಕ್ರೀಡಾಭಿಮಾನಿಗಳಲ್ಲಿ ಹರ್ಷ ತಂದಿದೆ.











Leave a Reply