
ಸುದ್ದಿ ಬೆಳಕು ವಾರ್ತೆ
ಹುಣಸಗಿ : ಭಾರತೀಯ ತತ್ವಶಾಸ್ತ್ರಕ್ಕೆ ಉಪನಿಷತ್ತು ಕೊಡುಗೆ ಅಪಾರ ಎಂದು ಬಲಶೆಟ್ಟಿಹಾಳ ಶಿಕ್ಷಕ ದೇವರಾಜ ಕುಲಕರ್ಣಿ ಹೇಳಿದರು.
ಹುಣಸಗಿ ತಾಲೂಕು ವಿಕ್ರಮಪುರ ಓದುಗರ ಬಳಗದ ವತಿಯಿಂದ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಓದುಗರ ಭೇಟಿ-4 ನೇ ಕಾರ್ಯಕ್ರಮದಲ್ಲಿ ನಚಿಕೇತ- ಯಮನ ಸಂವಾದ ಕುರಿತು ಮಾತನಾಡಿದರು.
ಭಾರತೀಯ ತತ್ವಶಾಸ್ತ್ರದ ಅತ್ಯಂತ ಪ್ರಸಿದ್ಧ ಸಂವಾದಗಳಲ್ಲಿ ಕಠೋಪನಿಷತ್ತಿನ ಯಮ- ನಚಿಕೇತರ ಸಂವಾದ ಒಂದಾಗಿದೆ. ಮರಣದ ನಂತರ ಏನಾಗುತ್ತದೆ ಎಂದು ಕೇಳಿದ ನಚಿಕೇತನ ಪ್ರಶ್ನೆಗೆ ಯಮಧರ್ಮನು, ಆತ್ಮದ ಅಮರತ್ವ, ಧರ್ಮ, ಮೋಕ್ಷ ಮತ್ತು ಸತ್ಯಜೀವನದ ಮಹತ್ವವನ್ನು ಉಪದೇಶಿಸುತ್ತಾರೆ. ಆತ್ಮವು ನಾಶವಾಗುವುದಿಲ್ಲ, ಜ್ಞಾನ, ಧರ್ಮ ಮತ್ತು ಸತ್ಯದ ಮಾರ್ಗ ಅನುಸರಿಸಿದರೆ ಮಾತ್ರ ಮೋಕ್ಷವನ್ನು ಪಡೆಯಬಹುದು ಎಂದರು.
ಪ್ರಾಂಶುಪಾಲರಾದ ಭೀಮಣ್ಣ ಹುಬ್ಬಳ್ಳಿ ಲಕ್ಷ್ಮೀಶನ ಜೈಮಿನಿ ಭಾರತದ ಕುರಿತು ಮಾತನಾಡಿದರು.
ಶ್ರೀಕೃಷ್ಣನ ಮಹಿಮೆ, ಅರ್ಜುನನ ಪರಾಕ್ರಮ, ಧರ್ಮದ ಮಹತ್ವ ಮತ್ತು ಭಕ್ತಿಯ ಸಂದೇಶಗಳನ್ನು ಮನೋಜ್ಞವಾಗಿ ಜೈಮಿನಿ ಭಾರತದಲ್ಲಿ ಚಿತ್ರಿಸಲಾಗಿದೆ. ಮಹಾಭಾರತದ ಜೈಮಿನಿ ಸಂಹಿತೆಯನ್ನು ಆಧರಿಸಿ ಮಹಾಕಾವ್ಯವಿದು. ವಿಶೇಷವಾಗಿ ಅಶ್ವಮೇಧ ಪರ್ವದ ಕಥೆಯನ್ನು ಸುಂದರವಾಗಿ, ಭಾವಪೂರ್ಣವಾಗಿ ಮತ್ತು ಸರಳ ಕನ್ನಡದಲ್ಲಿ ನಿರೂಪಿಸುತ್ತದೆ ಎಂದರು.
ಕೃಷಿಕರಾದ ಸುನಿಲ ಚಂದಾ ಪಾಂಡವರ ಸ್ವರ್ಗಾರೋಹಣ ಪರ್ವ ಕುರಿತು ಮಾತನಾಡಿದರು.
ಧರ್ಮ, ಸತ್ಯ, ಕರುಣೆ ಮತ್ತು ನಿಷ್ಠೆಯನ್ನು ಜೀವನದಲ್ಲಿ ಪಾಲಿಸಿದವರಿಗೆ ಅಂತಿಮವಾಗಿ ವಿಜಯ, ಮುಕ್ತಿ ಮತ್ತು ಶ್ರೇಷ್ಠ ಫಲ ದೊರೆಯುತ್ತದೆ. ಪಾಂಡವರು ಹಿಮಾಲಯದ ಕಡೆಗೆ ಮಹಾಪ್ರಸ್ಥಾನದ ಪ್ರಯಾಣದ ವೇಳೆ ಮೊದಲು ದ್ರೌಪದಿ, ಸಹದೇವ, ನಕುಲ, ಅರ್ಜುನ ಮತ್ತು ಭೀಮ ತಮ್ಮ ತಮ್ಮ ಸಣ್ಣ ದೋಷಗಳ ಕಾರಣದಿಂದ ಮಾರ್ಗದಲ್ಲೇ ಬೀಳುತ್ತಾರೆ. ಧರ್ಮರಾಜ ಯುಧಿಷ್ಠಿರ ಮಾತ್ರ ಧರ್ಮವನ್ನು ಪಾಲಿಸುತ್ತಾ, ತನ್ನೊಂದಿಗೆ ಬಂದ ನಾಯಿಯನ್ನು ಬಿಡದೆ ಮುಂದೆ ಸಾಗುತ್ತಾನೆ. ಕೊನೆಯಲ್ಲಿ ಆ ನಾಯಿ ಧರ್ಮದೇವನೆಂಬುದು ತಿಳಿದುಬರುತ್ತದೆ. ಯುಧಿಷ್ಠಿರನ ಧರ್ಮ ನಿಷ್ಠೆಯನ್ನು ದೇವತೆಗಳು ಮೆಚ್ಚುವರು ಎಂದರು.
ಕಾರ್ಯಕ್ರಮದ ಕುರಿತು ಮಹೇಶ ಸ್ಥಾವರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯಿಕ ಕೃತಿಗಳ ಅಧ್ಯಯನ ಇಂದಿನ ಮೊಬೈಲ್ ಯುಗದಲ್ಲಿ ಮರೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ ಎಂದರು. ಗಣ್ಯರಿಗಾಗಿ ಹಾರ ಶಾಲು ಹಾಕಿ ಸನ್ಮಾನಿಸುವ ಬದಲು ದಂಡಿನ ಬುಕ್ ಸ್ಟಾಲ್ ನ ಮಾಲೀಕರಾದ ಮಲ್ಲಿಕಾರ್ಜುನ ದಂಡಿನರವರು ಪುಸ್ತಕಗಳನ್ನು ಉಚಿತವಾಗಿ ಗಣ್ಯರಿಗೆ ನೀಡಿದರು. ಮುಂದೆಯೂ ಕೂಡ ಉಚಿತ ಪುಸ್ತಕಗಳನ್ನು ವಿಕ್ರಮಪುರ ಓದುಗರ ಬಳಗಕ್ಕೆ ನೀಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಶಾಖಾ ಗ್ರಂಥಾಲಯದ ಮೇಲ್ವಿಚಾರಕಿ ನೀಲಮ್ಮ ಎಂ.ಗಣಾಚಾರಿ ಸ್ವಾಗತಿಸಿದರು, ಸಂಗಮ್ಮ ಸಜ್ಜನ್ ಪ್ರಾರ್ಥಿಸಿದರು, ಸವಿತಾ ಬೆಳ್ಳಿ ನಿರೂಪಿಸಿದರು, ನಾಗರಾಜ ಬಿರಾದಾರ ವಂದಿಸಿದರು.












Leave a Reply