
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಬಂಧನವು “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. “ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಲಕ್ಷಾಂತರ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸೋರಿಕೆಯಾದ ಪರಿಣಾಮ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಬೆಲೆ ಇಲ್ವಾ? ಹೋರಾಟವನ್ನು ಹತ್ತಿಕ್ಕುವ ಮೂಲಕ ಕೇಂದ್ರ ಸರ್ಕಾರವು ತನ್ನ ಹತಾಶೆ ಹಾಗೂ ಬಂಡತನವನ್ನು ಪ್ರದರ್ಶಿಸುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹ:
“ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ‘ವಿಶ್ವಗುರು’ ಎಂದು ಕರೆದುಕೊಳ್ಳುತ್ತಾರೆ. ಆದರೆ, ಅವರಿಗೆ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಈ ಸೂಕ್ಷ್ಮತೆಯನ್ನು ಅರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕಿತ್ತು. ದೇಶಾದ್ಯಂತ ಪರಿಣಿತರನ್ನು ಕರೆಸಿ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಸಾಂತ್ವನ ಹೇಳಬೇಕಾದ ಪ್ರಧಾನಿ, ಸಚಿವರನ್ನು ರಕ್ಷಿಸುವ ಮೂಲಕ ಬಂಡತನ ಪ್ರದರ್ಶಿಸುತ್ತಿದ್ದಾರೆ,” ಎಂದು ಅವರು ಟೀಕಿಸಿದರು.
ಕರ್ನಾಟಕದ ಸಿಇಟಿ ಮಾದರಿ:
ಪರೀಕ್ಷಾ ವ್ಯವಸ್ಥೆಯ ಬಗ್ಗೆ ಮಾತನಾಡಿದ ಸಚಿವರು, “ಕರ್ನಾಟಕದಲ್ಲಿ ನಡೆಯುವ ಸಿಇಟಿ ಪರೀಕ್ಷೆಯು ಇಡೀ ದೇಶಕ್ಕೆ ಮಾದರಿಯಾಗಿದೆ. ಇಂದು ಎಐ (AI) ನಂತಹ ಅತ್ಯಾಧುನಿಕ ತಂತ್ರಜ್ಞಾನಗಳಿದ್ದರೂ, ಕೇಂದ್ರ ಸರ್ಕಾರವು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ,” ಎಂದು ದೂರಿದರು.
ಅಚ್ಛೇ ದಿನ್ ಎಲ್ಲಿದೆ?
“ಮೋದಿ ಅವರು ಅಧಿಕಾರಕ್ಕೆ ಬಂದು 14 ವರ್ಷಗಳಾಗಿವೆ. ‘ಅಚ್ಛೇ ದಿನ್’ ತರುತ್ತೇವೆ ಎಂದವರು ದೇಶಕ್ಕೆ ಏನು ಒಳ್ಳೆಯ ದಿನ ತಂದಿದ್ದಾರೆ? ಗ್ಯಾಸ್ ಮತ್ತು ಪೆಟ್ರೋಲ್ ದರ ಗಗನಕ್ಕೇರಿದೆ. ರೈತರು ಬೀದಿಪಾಲಾಗಿದ್ದಾರೆ. ಉದ್ಯೋಗ ಸೃಷ್ಟಿ ಶೂನ್ಯವಾಗಿದೆ. ನೋಟ್ ಬ್ಯಾನ್‌ನಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದೇ ಸರ್ಕಾರದ ಸಾಧನೆ,” ಎಂದು ವ್ಯಂಗ್ಯವಾಡಿದರು.
ಸಚಿವ ಸಂಪುಟ ವಿಸ್ತರಣೆ ಚರ್ಚೆ ಶೀಘ್ರ:
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, “ಸದ್ಯ ಲೋಕಸಭಾ ಅಧಿವೇಶನ ಹಾಗೂ ನೀಟ್ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಶನಿವಾರ ಅಥವಾ ಭಾನುವಾರ ಹೈಕಮಾಂಡ್ ನಾಯಕರು ಕರೆಸಿ ಈ ವಿಚಾರದ ಬಗ್ಗೆ ಮಾತನಾಡಬಹುದು,” ಎಂದು ಸ್ಪಷ್ಟಪಡಿಸಿದರು.












Leave a Reply