
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಐಪಿ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂಬ ಆರೋಪದ ನಡುವೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ವಿದ್ಯುತ್ ಲೈನ್ ಕತ್ತರಿಸಿರುವ ಘಟನೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಬಾಚವಾರ, ನಿಂಗಸದಲ್ಳಿ, ಹಣಮಾನಾಯಕ ತಾಂಡಾ ಸೇರಿದಂತೆ ಹಲವು ಗ್ರಾಮಗಳ ರೈತರು ಜೇಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಯರಗೋಳ ಗ್ರಾಮದ 110 ಕೆವಿ ವಿದ್ಯುತ್ ಕೇಂದ್ರದಿಂದ ಬಾಚವಾರ, ನಿಂಗಸದಲ್ಳಿ ಹಾಗೂ ಹಣಮಾನಾಯಕ ತಾಂಡಾ ಭಾಗದ ಐಪಿ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಆದರೆ ಯರಗೋಳ ಭಾಗದ ರೈತರಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ ಎಂಬ ಕಾರಣ ನೀಡಿ, ಇತರೆ ಗ್ರಾಮಗಳಿಗೆ ಹೋಗುತ್ತಿದ್ದ ವಿದ್ಯುತ್ ಲೈನ್ ಅನ್ನು ಕತ್ತರಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವೈರ್ ಕತ್ತರಿಸಿದ ಬಳಿಕ ಅದರ ತುಂಡುಗಳನ್ನು ಕೈಯಲ್ಲಿ ಹಿಡಿದುಕೊಂಡು ಜೇಸ್ಕಾಂ ಅಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದ ರೈತರು, ವಿದ್ಯುತ್ ಸಂಪರ್ಕವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈರ್ ಕತ್ತರಿಸಿದ ಬಗ್ಗೆ ಪ್ರಶ್ನಿಸಿದಾಗ ಯರಗೋಳ ಗ್ರಾಮದ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಬಾಚವಾರ ಭಾಗದ ರೈತರು ಆರೋಪಿಸಿದರು.
ಘಟನೆಯಿಂದ ಆಕ್ರೋಶಗೊಂಡ ರೈತರು ಯಾದಗಿರಿ ಜೇಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯ ಮುಖ್ಯ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ವಿದ್ಯುತ್ ವೈರ್ ಕತ್ತರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬಾಚವಾರ, ನಿಂಗಸದಲ್ಳಿ, ಹಣಮಾನಾಯಕ ತಾಂಡಾ ಸೇರಿದಂತೆ ಎಲ್ಲಾ ಗ್ರಾಮಗಳ ಐಪಿ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು.
ಜೇಸ್ಕಾಂ ಅಧಿಕಾರಿಗಳು ರೈತರ ಮನವಿ ಆಲಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದು, ಘಟನೆ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.











Leave a Reply