ಕೃಷಿ ಸಚಿವರಿಲ್ಲದೆ ರೈತ ಸಂಕಷ್ಟ: ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ರಾಚನಗೌಡ ಮುದ್ನಾಳ ಆಕ್ರೋಶ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಮುಂಗಾರು ಆರಂಭವಾಗಿ ರಾಜ್ಯದಾದ್ಯಂತ ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವ ಈ ನಿರ್ಣಾಯಕ ಸಂದರ್ಭದಲ್ಲಿ ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರನ್ನು ನೇಮಿಸದೆ ರಾಜ್ಯ ಸರ್ಕಾರ ಅನ್ನದಾತನನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ತೀವ್ರವಾಗಿ ಖಂಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ರೈತರು ಭೂಮಿ ಹದಗೊಳಿಸಿ ಬೀಜ ಬಿತ್ತಲು ಕಾಯುತ್ತಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಡಿಎಪಿ, ಯೂರಿಯಾ ಸಿಗದೆ ರೈತರು ಬೆಳಗ್ಗಿನಿಂದ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ರಿಯಾಯಿತಿ ಬೀಜದ ಕೊರತೆಯೂ ತೀವ್ರವಾಗಿದೆ. ಸರ್ಕಾರಿ ಉಗ್ರಾಣ ಖಾಲಿಯಾಗಿದ್ದು, ಅಸಹಾಯಕ ರೈತರು ಖಾಸಗಿ ಅಂಗಡಿಗಳ ಮೊರೆ ಹೋಗಿ ನಕಲಿ ಬೀಜ, ಕಳಪೆ ಕೀಟನಾಶಕ ಖರೀದಿಸಿ ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಜಾಗೃತ ದಳ ನಿಷ್ಕ್ರಿಯವಾಗಿದೆ.

ಕೇಂದ್ರ ಸರ್ಕಾರ ಮುಂಗಾರಿಗೆ ರಾಜ್ಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸಿದೆ. ಆದರೆ ರಾಜ್ಯದಲ್ಲಿ ಇಲಾಖೆಗೆ ನಾಯಕತ್ವವೇ ಇಲ್ಲದ ಕಾರಣ, ಆ ಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆಯೇ ಕುಸಿದಿದೆ. ಅಧಿಕಾರಿಗಳು ಕಡತದ ಮೇಲೆ ದಾಸ್ತಾನು ತೋರಿಸುತ್ತಿದ್ದರೆ, ವಾಸ್ತವದಲ್ಲಿ ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಗದಗ್, ಹಾವೇರಿ ಜಿಲ್ಲೆಗಳ ರೈತ ಸಂಪರ್ಕ ಕೇಂದ್ರಗಳ ಮುಂದೆ ‘ದಾಸ್ತಾನಿಲ್ಲ’ ಫಲಕ ರಾರಾಜಿಸುತ್ತಿದೆ. ಎಕರೆಗೆ ಒಂದೊಂದು ಚೀಲ ಗೊಬ್ಬರ ಕೊಟ್ಟು ರೈತನನ್ನು ವಾಪಸ್ ಕಳುಹಿಸಲಾಗುತ್ತಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ಆಂತರಿಕ ಗೊಂದಲದಲ್ಲಿ ಮುಳುಗಿ ಕೃಷಿಯಂತಹ ಜೀವನಾಡಿ ಇಲಾಖೆಯನ್ನು ಅನಾಥ ಮಾಡಿದ್ದಾರೆ. ಕಡತಗಳ ವಿಲೇವಾರಿ ನಿಂತಿದೆ. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ತಪ್ಪಿದೆ. ಇದರ ಲಾಭ ಪಡೆದು ಕಾಳಸಂತೆಕೋರರು ಕೃತಕ ಅಭಾವ ಸೃಷ್ಟಿಸಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ.

ಜೂನ್ ತಿಂಗಳು ಬಿತ್ತನೆಗೆ ಅತ್ಯಂತ ಮುಖ್ಯ. ಈಗ ಬಿತ್ತನೆ ತಪ್ಪಿದರೆ ರೈತನ ಇಡೀ ವರ್ಷದ ಶ್ರಮ ವ್ಯರ್ಥ. ಸಾಲದ ಸುಳಿಗೆ ಸಿಲುಕಿ ಬದುಕೇ ಬೀದಿಗೆ ಬೀಳುತ್ತದೆ. ಸರ್ಕಾರ ರಾಜಕೀಯ ಹಿತಾಸಕ್ತಿ ಬದಿಗಿಟ್ಟು ಮೊದಲು ಅನ್ನದಾತನ ನೋವಿಗೆ ಸ್ಪಂದಿಸಬೇಕು.

ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಕೃಷಿ ಇಲಾಖೆಗೆ ದಕ್ಷ, ಪೂರ್ಣಾವಧಿ ಸಚಿವರನ್ನು ನೇಮಿಸಬೇಕು. ಗೊಬ್ಬರ, ಬೀಜ ವಿತರಣೆಯಲ್ಲಿ ಪಾರದರ್ಶಕತೆ ತರಬೇಕು. ಕಾಳಸಂತೆ ಹಾಗೂ ನಕಲಿ ಬೀಜ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾದಗಿರಿ ಸೇರಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಯುದ್ಧೋಪಾದಿಯಲ್ಲಿ ಗೊಬ್ಬರ, ಬೀಜ ಪೂರೈಸಬೇಕು.ರೈತರ ಈ ಗಂಭೀರ ಸಮಸ್ಯೆ ಬಗೆಹರಿಸದಿದ್ದರೆ, ರೈತರ ಹಿತರಕ್ಷಣೆಗಾಗಿ ಭಾರತೀಯ ಜನತಾ ಪಾರ್ಟಿ ಉಗ್ರ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ರಾಚನಗೌಡ ಮುದ್ನಾಳ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Suddi Belaku