
ಡೆವಲಪ್ಮೆಂಟ್ ಪಾಲಿಟಿಕ್ಸ್ ಮಾಡಿ, ಸೆಟಲ್‌ಮೆಂಟ್ ರಾಜಕಾರಣ ಬೇಡ: ಡಿಕೆಶಿಗೆ ಶಾಸಕ ಕಂದಕೂರ ಸಲಹ
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ರಾಜ್ಯದಲ್ಲಿ ಅಧಿಕಾರ ನಡೆಸಿದ ಮೂರು ಜನ ಮುಖ್ಯಮಂತ್ರಿಗಳು ತಮ್ಮ ಜನಪರ ಆಡಳಿತದಿಂದ ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದು ಗುರಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ತಿಳಿಸಿದರು.
ಸೋಮವಾರ ಮತಕ್ಷೇತ್ರದ ಹೋರುಂಚಾ ಹಾಗೂ ಯರಗೋಳ ಗ್ರಾಮದಲ್ಲಿ ಕೆಕೆಆರ್ ಡಿಬಿಯ ಮೈಕ್ರೋ ಎಸ್.ಸಿಪಿ ಯೋಜನೆಯಡಿ ಥಾವರು ನಾಯಕ ತಾಂಡಾದಿಂದ ತಾನು ನಾಯಕ ತಾಂಡಾವರೆಗೆ ಮುಖ್ಯರಸ್ತೆ 4 ಕೋಟಿ ರೂ.ವೆಚ್ಛದಲ್ಲಿ ಡಾಂಬರೀಕರಣ ಹಾಗೂ ಹೋರುಂಚಾ ಗ್ರಾಮದಲ್ಲಿ ನಡುವಿನ ತಾಂಡಾದಿಂದ ಯಡ್ಡಳ್ಳಿ ಗ್ರಾಮದ ಹರಿಜನವಾಡಾದ ವರೆಗೆ 3 ಕೋಟಿ ರೂ.ವೆಚ್ಛದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ಸಾಲಮನ್ನಾ, ಜನತಾ ದರ್ಶನ, ಗ್ರಾಮ ವಾಸ್ತವ್ಯ ಹಾಗೂ ಸುವರ್ಣ ಗ್ರಾಮದಂಥ ಮಹತ್ವದ ಯೋಜನೆ ಜಾರಿಗೊಳಿಸುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು, ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿಗಳಿಗೆ ಸೈಕಲ ವಿತರಣೆ ಯೋಜನೆ ತಂದು ಅನುಕೂಲ ಮಾಡಿಕೊಟ್ಟರು. ಇನ್ನೂ ಸಿದ್ದರಾಮಯ್ಯನವರು ಅನೇಕ ಭಾಗ್ಯಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರದ ನೂತನ ಆಡಳಿತದ ಚುಕ್ಕಾಣಿ ಹಿಡಿಯಲಿರುವರು ಈ ಮೂರು ನಾಯಕರ ಕಾರ್ಯಕ್ರಗಳನ್ನು ಆದರ್ಶವಾಗಿ ಇಟ್ಟುಕೊಂಡು ಆಡಳಿತ ನಡೆಸಬೇಕು. ಅಲ್ಲದೆ ಇಕ ಮೂರು ಜನ ಮುಖ್ಯಮಂತ್ರಿಗಳು ನಾಡಿನ ಜನರ ಭಾವನೆ ಅರ್ಥಮಾಡಿಕೊಂಡು ಡೆವಲಪಮೆಂಟ್ ಪಾಲಿಟಿಕ್ಸ್ ಮಾಡಿದ್ದಾರೆ ಎಂದರು.

ಉತ್ತರಾಧಿಮಠದ ಪಂ.ಸತ್ಯಬೋಧಾಚಾರ್ಯ ಘಟಾಲಿ ಮಾತನಾಡಿ, ಕ್ಷೇತ್ರದಲ್ಲಿನಾವು ಎಷ್ಟೋ ನಾಯಕರನ್ನು ಕಂಡಿದ್ದೇವೆ. ಆದರೆ, ಅಭಿವೃದ್ಧಿ ಪರ ಇರುವ ಶಾಸಕ ಶರಣಗೌಡ ಕಂದಕೂರ ಅವರಂಥ ನಾಯಕತ್ವ ಸಿಗುವುದು ಬಹಳ ಅಪರೂಪ. ಥಾವರು ನಾಯಕ ತಾಂಡಾ ರಸ್ತೆ ಸುಧಾರಣೆಯಿಂದ ಈ ಭಾಗದ ಜನತೆ ಸಂಚಾರಕ್ಕೆ ಪಡುತ್ತಿರುವ ಕಷ್ಟ ದೂರವಾಗಲಿದೆ. ಶ್ರೀ ಟೀಕಾಚಾರ್ಯರು ಶಾಸಕರಿಗೆ ಆಶಿರ್ವದಿಸಲಿ ಎಂದು ಹರಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಪರಶುರಾಮ, ತಾಪಂ ಎಡಿ ರಾಮಚಂದ್ರ, ಕಂದಾಯ ನಿರೀಕ್ಷಕ ರಾಜಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಭೋಜನಗೌಡ ಯಡ್ಡಳ್ಳಿ, ರವಿ ಪಾಟೀಲ್ ಬಸ್ಸಣ್ಣ ದೇವರಳ್ಳಿ, ಶಂಕ್ರಪ್ಪ ದಿಬ್ಬಾ, ಶಿವಣ್ಣ ಹಿರಿಕೇರಾ, ಶಿವು ಭೀಮನಳ್ಳಿ, ಮಾರ್ಥಂಡ ಯರಗೋಳ, ಸಿದ್ದಪ್ಪ ಹೋರುಂಚಾ, ಮಜಾಯಿದ್ ಸೇಠ್, ಮಲ್ಲನಗೌಡ ಹೋರುಂಚಾ, ರಾಜುಗೌಡ ಚಾಮನಳ್ಳಿ,ಗುರು ಅಲ್ಲಿಪುರ ತಾಂಡಾ, ಸಾಬಣ್ಣಾ ಹೋರುಂಚಾ, ಹಂಪಯ್ಯಾ ಅಲ್ಲಿಪುರ, ದೇವಪ್ಪ ವಡ್ನಳ್ಳಿ, ಸಿದ್ದಲಿಂಗರಡ್ಡಿ ಅರಿಕೇರಾ, ರಾಘವೇಂದ್ರ ವಡ್ನಳ್ಲಿ, ನಾಗರಾಜ ಮಲಕಪನಳ್ಳಿ, ಮರೆಪ್ಪ ಚಡಬನೂರ, ಗುತ್ತಿಗೆದಾರ ಸಿದ್ದಪ್ಪಗೌಡ ಕಾಳೆಬೆಳಗುಂದಿ ಇದ್ದರು.
ರಾಜ್ಯದ ಜನತೆಗೆ ಜನಪರ ಆಡಳಿತ ಕೊಡಿ….
ಮುಂದಿನ ಮುಖ್ಯಮಂತ್ರಿಗಳು ಸೆಟಲ್ ಮೆಂಟ್ ಪಾಲಿಟಿಕ್ಸ್ ಮಾಡದೆ ಡೆವಲಪಮೆಂಟ್ ಪಾಲಿಟಿಕ್ಸ್ ಮಾಡುವ ಮೂಲಕ ಜನತೆಗೆ ಉತ್ತಮ ಆಡಳಿತ ನೀಡಲಿ ಎಂದು ಶಾಸಕ ಶರಣಗೌಡ ಕಂದಕೂರ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ ಅವರಿಗೆ ಶುಭ ಹಾರೈಸಿದರು.
ನೀವು ಬದಲಾಗುತ್ತೀರಾ? ನಾನೇ ಬದಲಾಯಿಸಬೇಕಾ…
ಯರಗೋಳ ಗ್ರಾಮದಲ್ಲಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಶಾಸಕರಿಗೆ ಜನತೆ ಜೆಸ್ಕಾಂ ಸಿಬ್ಬಂದಿಗಳ ಬೇಜವಾಬ್ದಾರಿತನದ ಬಗ್ಗೆ ದೂರಿದರು. ಇದರಿಂದ ಕೆಂಡಾಮಂಡಲರಾದ ಶಾಸಕರು ಸರ್ಕಾರ ಕೊಡುವ ಸಂಬಳಕ್ಕೆ ಕೆಲಸ ಮಾಡಿ. ನೀವು ಬದಲಾಗುತ್ತೀರಾ? ನಾನೇ ಬದಲಾಯಿಸಬೇಕಾ ಎಂದು ಗುಡುಗಿದರು.
ವಡ್ನಳ್ಳಿ ಗ್ರಾಮದಲ್ಲಿ ಟಿಸಿ ಸುಟ್ಡು ವಾರಗಟ್ಟಲೇ ಆಗಿದೆ. ಗ್ರಾಮಸ್ಥರು ವಾಹನ ವ್ಯವಸ್ಥೆ ಮಾಡುತ್ತೇವೆ ಟಿಸಿ ಕೊಡಿ ಎಂದರೂ ಲೈನಮ್ಯಾನ್ ಮತ್ತು ಎಸ್ಓ ಸ್ಪಂದನೆ ಮಾಡುತ್ತಿಲ್ಲ. ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಇಇ ರಾಘವೇಂದ್ರ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.












Leave a Reply