ಗ್ರಾಮೀಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು: ಶಾಸಕ ಕಂದಕೂರ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಸರ್ಕಾರದಿಂದ ಬಿಡುಗಡೆಗೊಳಿಸುವ ಅನುದಾನವನ್ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕಾರಿಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಶಾಸಕ ಶರಣಗೌಡ ಕಂದಕೂರ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಬುಧವಾರ ಗುರಮಠಕಲ್ ಕ್ಷೇತ್ರದ ಚಿನ್ನಾಕಾರ್ ಕ್ರಾಸ್ ಬಳಿ ಕೆಕೆಆರ್ಡಿಬಿ ಮೈಕ್ರೋ ಸಾಮಾನ್ಯ ಯೋಜನೆ ಅಡಿಯಲ್ಲಿ 9.90 ಕೋಟಿ ರೂ.ವೆಚ್ಛದಲ್ಲಿ ಮತಕ್ಷೇತ್ರದ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ 16 ಮುಖ್ಯ ರಸ್ತೆ ಆಯ್ದು ಭಾಗಗಳಲ್ಲಿ ಮರು ಡಾಂಬರಕರಣ ಹಾಗೂ ಗುರುಮಠಕಲ್ ಪಟ್ಟಣದ ರಸ್ತೆ ಅಗಲೀಕರಣ ಮತ್ತು ಬ್ರಿಡ್ಜ್ ನಿರ್ಮಾಣ ಹಾಗೂ ಗುರುಮಠಕಲ್ ಪಟ್ಟಣದಲ್ಲಿ ಸೌಂದರ್ಯಿಕರಣ ಮತ್ತು ಆಧುನಿಕ ಬಸ್ ಸ್ಟ್ಯಾಂಡ್ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗೆ ನಾವು ಸರ್ಕಾರದ ಹಂತದಲ್ಲಿ ಸಾಕಷ್ಟು ಶ್ರಮಪಟ್ಟು ಅನುದಾನ ತರುತ್ತೇವೆ. ಅದು ಸದ್ಬಳಕೆಯಾದಾಗ ಮಾತ್ರ ಜನತೆಗೆ ಅನುಕೂಲವಾಗುವದಲ್ಲದೆ, ನಾವು ಪಟ್ಟ ಶ್ರಮ ಸಾರ್ಥಕವಾಗುತ್ತದೆ. ಇದು ಅಂತರರಾಜ್ಯ ಸಂಪರ್ಕೀಸುವ ಪ್ರಮುಖ ರಸ್ತೆ, ಗಡಿಭಾಗದ ಜನರು ತಮ್ಮ ದೈನಂದಿನ ಕಾರ್ಯಕ್ರಗಳಿಗಾಗಿ ಗುರುಮಿಠಕಲ್, ತೆಲಂಗಾಣದ ನಾರಾಯಣಪೇಟಗೆ ಹೆಚ್ಚಾಗಿ ತೆರಳುತ್ತಾರೆ ಎಂದರು.

ಅಲ್ಲದೇ ಹೈದ್ರಾಬಾದ್ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಭಾರಿ ವಾಹನಗಳ ಓಡಾಟ ಹೆಚ್ಚಾಗಿದೆ, ಅದಕ್ಕಾಗಿ ರಸ್ತೆಯನ್ನು ದುರಸ್ಥಿಗೊಳಿಸಲಾಗುತ್ತಿದೆ. ಗುತ್ತಿಗೆದಾರರು ಹಾಗೂ ನಿರ್ವಹಣೆ ಮಾಡುವ ಲೋಕೋಪಯೋಗಿ ಅಧಿಕಾರಿಗಳು ಗುಣಮಟ್ಟದಿಂದ ಕಾಮಗಾರಿ ಕೈಗೊಂಡು ನಿಗಧಿತ ಅವಧಿಯೊಳಗೆ ಮುಗಿಸಬೇಕೆಂದು ನಿರ್ದೇಶನ ನೀಡಿದರು.

ಇನ್ನೂ ಗುರಮಠಕಲ್ ಪಟ್ಟಣದಲ್ಲಿ ಬೀದಿ ದೀಪಗಳು ಅಳವಡಿಸಿದ ಮೇಲೆ ಅವುಗಳ ನಿರ್ವಹಣೆ ಮಾಡುವ ಜವಾಬ್ದಾರಿ ಪುರಸಭೆ ಅಧಿಕಾರಿಗಳದ್ದು. ಪಟ್ಟಣದ ಉದ್ಯಾನವನ ಸೌಂದರ್ಯಿಕರಣಕ್ಕೆ 50 ಲಕ್ಷ ನೀಡಲಾಗಿದೆ. ಅಲ್ಲದೆ, ಕಾಲವಾರ ಮತ್ತು ಅಂಬಿಗರ ಚೌಡಯ್ಯನವರ ವೃತ್ತದ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೂ ಅಗತ್ಯ ಕ್ರಮ‌ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಸ್ಥಳದಲ್ಲಿದ್ದ ಚಿನ್ನಾಕಾರ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮಗಳ, ತಾಂಡಾಗಳ ಜನರ ಕುಂದು-ಕೊರತೆಗಳನ್ನು ಆಲಿಸಿ, ಪಕ್ಕದಲ್ಲಿಯೇ ಇದ್ದ ತಾಲ್ಲೂಕಾ ಮಟ್ಟದ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚಿಸಿದರು.
ಇನ್ನೂ ಕೆಲವು ಸಮಸ್ಯೆಗಳಿಗೆ ತಾವೇ ಖುದ್ದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಾಸ್ತವಿಕ ಪರಿಸ್ಥಿತಿ ವಿವರಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಈ ವೇಳೆ ತಹಸೀಲ್ದಾರ್ ಚನ್ನಮಲ್ಲಪ್ಪ ಗಂಟಿ, ತಾಪಂ ಇಒ ಅಮರೇಶ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಎಇಇ ಪರಶುರಾಮ, ಸಿಪಿಐ ದೌಲತ್, ಜೆಡಿಎಸ್ ಜಿಲ್ಲಾದ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಎಲ್ ಡಿ ಬ್ಯಾಂಕ್ ಅದ್ಯಕ್ಷ ರಾಮಣ್ಣ ಯಡ್ಡಳ್ಳಿ, ಮುಖಂಡರಾದ ಸಿದ್ದರಾಮರಡ್ಡಿ ಗುಂಜನೂರ, ಅಜಯರಡ್ಡಿ ಯಲ್ಹೇರಿ, ಶರಣು ಆವಂಟಿ, ರವಿ ಪೋಲಿಸ್ ಪಾಟೀಲ್, ಮಹೇಂದ್ರರಡ್ಡಿ ಕ‌ಂದಕೂರ, ಬಸಣ್ಣ ದೇವರಳ್ಳಿ, ರವಿ ಗವಿನೋಳ, ಬಸವರಾಜ ದಾಸರ, ಆನಂದ ವಡವಟ್, ಬಾಬು, ವೆಂಕಟೇಶ ಪೂಜಾರಿ, ಮೌಲಾನಾ ಸಾಬ್, ಹಣಮಂತ ಚಿನ್ನಾಕಾರ, ಸಂದೀಪ‌ ಚಿನ್ನಾಕಾರ, ಪಿಡಿಒ ಜಯಶ್ರೀ ಇದ್ದರು.


ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕೆಲಸ ಮಾಡಿ
ಸಧ್ಯ ಮಳೆಗಾಲ ಆರಂಭಗೊಂಡಿದ್ದು ಗ್ರಾಮೀಣ ಭಾಗದಲ್ಲಿ ಮನೆಗಳು ಬಿರುಕು ಬಿಡುವುದು ಮತ್ತು ಹಳೆ‌ ಮನೆಗಳು ನೆಲಕಚ್ಚುವ ಸಾಧ್ಯತೆ ಇರುತ್ತದೆ.‌ ಹೀಗಾಗಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿರಬೇಕು.‌ ಮೇಲಧಿಕಾರಿಗಳ ಸೂಚನೆಗೆ ಕಾಯದೆ ತಕ್ಷಣ ಕಾರ್ಯೋನ್ಮುಖರಾಗಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಕುಡಿಯುವ ನೀರುಬಕಲುಷಿತಗೊಳ್ಳುವ ಸಂಭವ ಹೆಚ್ಚಿರುವ ಕಾರಣ ಗ್ರಾಮೀಣ ಭಾಗದಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು ಎಂದು ಸ್ಥಳದಲ್ಲಿದ್ದ ತಹಸೀಲ್ದಾರರಿಗೆ ಶಾಸಕ ಕಂದಕೂರ ಸೂಚನೆ ನೀಡಿದರು.

Leave a Reply

Your email address will not be published. Required fields are marked *

Suddi Belaku